ಮೂವತೈದನೇ ವರ್ಷದ ಕಾರ್ತಿಕದ ದಿಂಡಿ ಯಾತ್ರೆ

0
0
loading...

ಗುಳೇದಗುಡ್ಡ: ವಾರಕರಿ ದೀಕ್ಷೆ ಪಡೆದವರು ಹಾಗೂ ಪಂಢರಪೂರದ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ಮಾಡಬೇಕೆನ್ನುವ ಭಕ್ತರು ದಿಂಡಿಯನ್ನು ಕೈಗೊಳ್ಳುತ್ತಾರೆ. ಪಂಢರಪೂರದ ವಿಠೋಬಾನ ದರ್ಶನ ಪಡೆಯಲು ಪಾದಯಾತ್ರೆ ಮೂಲಕ ಸಂತ ಮಂಡಳಿ ದಿಂಡಿ ಹೊರಡುವುದು ಒಂದು ಸಂಪ್ರದಾಯ. ಪಾದಯಾತ್ರೆ ಒಂದು ತಪಸ್ಸು. ವೈಜ್ಞಾನಿಕ ಹಿನ್ನೆಲೆಯಿಂದ ನೋಡಿದಾಗ ಆರೋಗ್ಯಕ್ಕೂ ಪೂರಕ. ಸತ್ಸಂಗ, ಕೀರ್ತನೆ, ಭಜನೆಯ ಮೂಲಕ ಈ ಯಾತ್ರೆಯನ್ನು ಹಮ್ಮಿಕೊಂಡರೆ ಆಧ್ಯಾತ್ಮ ಸಾಧನೆಯೂ ಸಾಧ್ಯ ಎಂಬ ಉದ್ದೇಶದಿಂದ ದಿಂಡಿ ಹೆಸರಿನಲ್ಲಿ ಪಂಡರಪುರಕ್ಕೆ ಕಾಲ್ನಡಿಗೆಯ ಮೂಲಕ ತೆರಳುವುದು ಈ ಭಾಗದಲ್ಲಿ ವಿಶೇಷ ಎನಿಸಿದೆ. ನಗರದ ಸರಾಫ ಬಜಾರದಲ್ಲಿರುವ ವಿಠ್ಠಲ ಮಂದಿರದ ಶಿವುರಕರ ವಾಸ್ಕರ ಸೇವಾ ಸಮಿತಿ ಪ್ರತಿವರ್ಷ ದಿಂಡಿಯನ್ನು ಕೈಗೊಳ್ಳುತ್ತದೆ. ಈ ಬಾರಿ ಬುಧವಾರ 35ನೇ ವರ್ಷದ ಪಾದಯಾತ್ರೆ ನಗರದÀ ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡಿದ್ದು ಪಾದಯಾತ್ರೆ ನ. 17 ರಂದು ಪಂಡರಪೂರ ತಲುಪಲಿದೆ.
ವಿಜಾಪೂರ-ಉಮದಿ ಮಾರ್ಗವಾಗಿ ಒಟ್ಟು 285 ಕಿ.ಮಿ. ದೂರವನ್ನು 11 ದಿನಗಳಲ್ಲಿ ಕ್ರಮಿಸುವ ದಿಂಡಿಯು ದಾರಿ ಮಧ್ಯದಲ್ಲಿ ಬರುವ ಕೆಲವು ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತದೆ. ಅಲ್ಲಿ ಕೀರ್ತನೆ, ಪ್ರವಚನ, ಅಭಂಗಗಳು, ಹರಿಪಾಠ, ಕಾಕಡಾರತಿ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯುತ್ತವೆ ಎಂದು ದಿಂಡಿಯ ಸಂಚಾಲಕ ಪರಶುರಾಮ ಸಿಂಧೆ ತಿಳಿಸಿದ್ದಾರೆ. ದಿಂಡಿಯ ಸ್ವಾಗತಕ್ಕೆ ಗ್ರಾಮಸ್ಥರು ಸಿದ್ಧತೆಯನ್ನು ಮಾಡಿ, ಅಂದು ರಾತ್ರಿಯ ಊಟ, ಬೆಳಗಿನ ಉಪಹಾರಕ್ಕೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ.

ಈ ದಿಂಡಿಯಲ್ಲಿ ಪಾಲ್ಗೊಂಡಿರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಲು ಸಂಚಾಲಕರ ಜೊತೆ ಹವಾಲ್ದಾರರು, ತಾಳಗಾರರು ಇರುತ್ತಾರೆ. ದಿಂಡಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಇವರ ಆದೇಶವನ್ನು ಪಾಲಿಸಬೇಕೆಂಬ ನಿಯಮವಿರುತ್ತದೆ. ದಿನಾಲೂ ಬೆಳಿಗ್ಗೆ 5 ಕ್ಕೆ ಪಾಂಡುರಂಗನ ನಾಮಸ್ಮರಣೆಯೊಂದಿಗೆ ಯಾತ್ರೆ ಆರಂಭವಾಗುತ್ತದೆ. ನ.17 ರಂದು ದಿಂಡಿ ಪಂಢರಪೂರ ತಲುಪುತ್ತದೆ. ಅಲ್ಲಿನ ಚಂದ್ರಭಾಗಾ ನದಿಯಲ್ಲಿ ಸ್ನಾನಮಾಡಿ ನಂತರ ಎಲ್ಲರೂ ಪಾಂಡುರಂಗನ ದರ್ಶನಕ್ಕೆ ತೆರಳುತ್ತಾರೆ. ಧರ್ಮಶಾಲೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯಿರುತ್ತದೆ. ಪಟ್ಟಣದ ಸರಾಫ್ ಬಜಾರ ವಿಠ್ಠಲ ಮಂದಿರದ ಶಿವೂರಕರ್ ವಾಸ್ಕರ್ ಸೇವಾ ಸಮಿತಿ ಕಳೆದ 34 ವರ್ಷಗಳಿಂದ ಈ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡಿರುವುದು ಒಂದು ವಿಶೇಷ.

loading...