ಶೈಕ್ಷಣಿಕ ಅವಧಿಯ ಮಧ್ಯೆ ಶಿಕ್ಷಕರ ವರ್ಗಾವಣೆ: ಜಿಪಂ ಸಭೆಯಲ್ಲಿ ಕಾವೇರಿದ ಚರ್ಚೆ

0
0
loading...

ಕನ್ನಡಮ್ಮ ಸುದ್ದಿ-ಕಾರವಾರ: ಶೈಕ್ಷಣಿಕ ಅವಧಿಯ ಮಧ್ಯಂತರದಲ್ಲಿ ಶಿಕ್ಷಕರ ವರ್ಗಾವಣೆಯ ನೀತಿಯೇ ಅವೈಜ್ಞಾನಿಕ. ಶಿಕ್ಷಕರನ್ನು ಮಾನಸಿಕವಾಗಿ ತೊಳಲಾಡುವಂತೆ ಮಾಡಿದ್ದು ಸರಿಯಲ್ಲ ಎಂದು ಜಿಲ್ಲಾ ಪಂಚಾಯತ್‌ನ ಸಾಮಾನ್ಯಸಭೆಯಲ್ಲಿ ಬಹುತೇಕ ಸದಸ್ಯರು ಪಕ್ಷಬೇಧ ಮರೆತು ಟೀಕಿಸಿದರು.
ಜಿ.ಪಂ.ಅಧ್ಯಕ್ಷೆ ಜಯಶ್ರಿ ಮೊಗೇರಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಶಿಕ್ಷಣ ಇಲಾಖೆಯ ಚರ್ಚೆ ಬರುತ್ತಿದ್ದಂತೆ ಹಿರಿಯ ಸದಸ್ಯರಾದ ಜಿ.ಎನ್‌.ಹೆಗಡೆ ಮುರೇಗಾರ, ಪುಷ್ಪಾ ನಾಯ್ಕ, ಯಲ್ಲಾಪುರ ತಾ.ಪಂ.ಅಧ್ಯಕ್ಷ ಭವ್ಯ ಶೆಟ್ಟಿ, ಜಿ.ಪಂ.ಸದಸ್ಯೆ ಕೃಷ್ಣಾ ಗೌಡ,ಶ್ರೀಕಲಾ ಎಸ್‌.ಶಾಸ್ತ್ರಿ,ಉಷಾ ಹೆಗಡೆ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಹಾಗೂ ಡಿಡಿಪಿಐಗಳನ್ನು ತರಾಟೆಗೆ ತೆಗೆದುಕೊಂಡರು. ಹೆಚ್ಚುವರಿ ಶಿಕ್ಷಕರ ನೆಪದಲ್ಲಿ ಅವರನ್ನು ವರ್ಗಾವಣೆ ಮಾಡುವುದು ತಪ್ಪು. ಮಕ್ಕಳ ಸಂಖ್ಯೆ ಆಧರಿಸಿ ಶಿಕ್ಷಕರನ್ನು ಶಾಲೆಗಳನ್ನು ನಡೆಸಿದರೆ ಹೇಗೆ? ವಿಷಯವಾರು ಶಿಕ್ಷಕರು ಬೇಡವೇ? ದೈಹಿಕ ಶಿಕ್ಷಕರನ್ನು ಸರ್ಕಾರ ಏಕೆ ನೀಡಿಲ್ಲ ಎಂದು ಸದಸ್ಯ ಬಸವರಾಜ ದೊಡ್ಮನೆ ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್‌ ನಿಂದ ಸಮಗ್ರ ಶೈಕ್ಷಣಿಕ ನೀತಿ ಹೋಗಲಿ. ನಮ್ಮ ಚರ್ಚೆಯ ಅಂಶ ಕ್ರೂಡಿಕರಿಸಿ ವರದಿ ಕಳುಹಿಸಿ ಎಂದು ಸಿಇಓ ಎಂ. ರೋಶನ್‌ ಅವರಿಗೆ ಮುರೇಗಾರ ಸಲಹೆ ನೀಡಿದರು. ಹಿಂದೆ ಶೈಕ್ಷಣಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ನಾನು ಮಾತನಾಡಿದ್ದು, ಸಲಹೆ ನೀಡಿದ ಅಂಶಗಳನ್ನು ಅಧಿಕಾರಿಗಳು ಮೀಟಿಂಗ್‌ ನೋಟ್ಸ ಹಾಗು ದೃಢೀಕರಣದಲ್ಲಿ ಸೇರಿಸಿಲ್ಲ. ಅಧಿಕಾರಿಗಳು ಯಾರ ಪರ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಬೇಡವೇ ಎಂದು ಪ್ರಶ್ನಿಸಿದರು. ಸಿಆರ್‌ಬಿ ಮತ್ತು ಬಿಆರ್‌ಪಿಗಳು ಹೊರತೆ ತಿರುಗಾಡುತ್ತಿದ್ದಾರೆ. ಕೆಲವರು ಬ್ಯುಜಿನೆಸ್‌ ಮಾಡುತ್ತಿದ್ದಾರೆ. ಕೆಲವರು ಹೆಡ್‌ ಮಾಸ್ತರರನ್ನು ಹೆದರಿಸಿಕೊಂಡು ಅಡ್ಡಾಡುತ್ತಿದ್ದಾರೆ. ಸಿಆರಪಿಗಳನ್ನು ಶಾಲೆಗಳಿಗೆ ಪಾಠ ಮಾಡಲು ಕಳುಹಿಸಿ ಎಂದು ಕೃಷ್ಣ ಗೌಡ ತಾಕೀತು ಮಾಡಿದರು. ಹತ್ತು ಮಕ್ಕಳಿರಲಿ, ಅರವತ್ತು ಮಕ್ಕಳಿರಲಿ, 5 ಮಕ್ಕಳಿರಲಿ ಅವರು ಬೇರೆ ಬೇರೆ ತರಗತಿಗಳಲ್ಲಿ ಇರುವಾಗ ಬೇರೆ ಬೇರೆ ವಿಷಯಗಳನ್ನು ಇಬ್ಬರೇ ಶಿಕ್ಷಕರು ಕಲಿಸಲು ಸಾಧ್ಯವೇ? ಹಾಗಾಗಿ ತಗರತಿಗೆ ಒಬ್ಬ ಶಿಕ್ಷಕರನ್ನು ನೇಮಿಸುವ ಪದ್ಧತಿ ಜಾರಿಗೆ ಬರಲಿ ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು. ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡಿ. ಶಾಲಾ ಕಟ್ಟಡಗಳನ್ನು ಸದೃಢಗೊಳಿಸಿ.
ಜೂನ್‌ -ಜುಲೈ 15 ರೊಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಿ ಎಂದು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲು ಸಿಇಓ ರೋಶನ್‌ ಅವರಿಗೆ ಶ್ರೀಕಲಾ ಶಾಸ್ತ್ರಿ,ಭವ್ಯ ಶೆಟ್ಟಿ, ವಿ.ಎನ್‌.ಹೆಗಡೆ ಮುರೇಗಾರ,ಕೃಷ್ಣ ಗೌಡ, ಶಿವಾನಂದ ಹೆಗಡೆ, ಸುಮಂಗಲಾ ವಿ.ನಾಯ್ಕ, ಜಗದೀಶ್‌ ನಾಯ್ಕ, ಪುಷ್ಪಾ ನಾಯ್ಕ ವಿನಂತಿಸಿದರು. ಈ ಸಂಬಂಧ ವಿಶೇಷ ಮನವಿಯನ್ನು ಮತ್ತು ಚರ್ಚೆಯ ಸಾರಂಶವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ರೋಶನ್‌ ಜಿ.ಪಂ.ಸಾಮಾನ್ಯ ಸಭೆಗೆ ಭರವಸೆ ನೀಡಿದರು. ನಗರಬಸ್ತಿಕೇರಿಯ ಮೊಗೆಹಳ್ಳಿ ಶಾಲೆಗೆ ಕಟ್ಟಡ ನಿರ್ಮಿಸಿಕೊಡಿ. ಹೊಸ ಕಟ್ಟಡ ಬರುತ್ತದೆ ಎಂದು ಇದ್ದ ಹಳೆಯ ಕಟ್ಟಡ ಕೆಡವಲಾಗಿದೆ ಎಂದು ಸದಸ್ಯೆ ಪುಷ್ಪಾ ನಾಯ್ಕ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ಗಮನ ಸೆಳೆದರು. ಕೆಪಿಸಿಯ ಹಳೆಯ ಕಟ್ಟಡವನ್ನು ತಾತ್ಕಲಿಕವಾಗಿ ಶಾಲೆ ನಡೆಸಲು ಮಾತುಕತೆ ಮಾಡಿ. ಖಾಸಗಿ ಕಟ್ಟಡ ಬಾಡಿಗೆಗೆ ಸಿಕ್ಕರೆ ಅದನ್ನು ಪ್ರಯತ್ನಿಸಿ ಎಂದು ಪ್ರಭಾರ ಡಿಡಿಪಿಐ ನಾರಾಯಣ ನಾಯಕಗೆ ಜಿ.ಪಂ. ಸಿಇಓ ಆದೇಶಿಸಿದರು. ಅಧಿಕಾರಿಯನ್ನು ಜಿಲ್ಲೆಯಿಂದ ವಾಪಾಸ್‌ ಕಳಿಸಲು ನಿರ್ಧಾರ: ಜಿಲ್ಲಾ ಪಂಚಾಯತ್‌ನ ಸಾಮಾನ್ಯಸಭೆಗೆ ಸತತ ಗೈರು ಹಾಜರಾಗುವ ಎಂಪಿಎಂಸಿ ಕಾರ್ಯದರ್ಶಿ (ಉಪನಿಬಂಧಕರು) ಹುದ್ದೆಯೇ ನಮ್ಮ ಜಿಲ್ಲೆಗೆ ಬೇಡ. ಸರ್ಕಾರ ಅವರನ್ನು ವಾಪಾಸ್‌ ಕರೆಯಿಸಿಕೊಳ್ಳಲಿ ಎಂದು ಸಿಇಓ ಎಂ.ರೋಶನ್‌ ಹೇಳಿದರು. ಅವರಿಗೆ ನೋಟೀಸ್‌ ನೀಡಿ ಕಾರಣ ಕೇಳಲಾಗಿದೆ. ಆದರೂ ಸಭೆಗೆ ಗೈರಾಗುತ್ತಿದ್ದಾರೆ. ಹಾಗಾಗಿ ಅವರು ಜಿಲ್ಲೆಯಲ್ಲಿ ಇರುವುದೇ ಬೇಡ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜನೌಷಧಿ ಮಳಿಗೆ ಪ್ರಾರಂಭಿಸಲು ಒತ್ತಾಯ: ಹೊನ್ನಾವರದಲ್ಲಿ ಜನೌಷಧಿ ಮಳಿಗೆ ಪ್ರಾರಂಭಿಸಲು ಸದಸ್ಯೆ ಶ್ರೀಕಲಾ ಶಾಸ್ತ್ರಿ ಒತ್ತಾಯಿಸಿದರು. ಡಿಎಚ್‌ಓ ಪ್ರತಿಕ್ರಿಯಿಸಿ ಮುಂದಿನ ತಿಂಗಳಲ್ಲಿ ಜನೌಷಧಿ ಕೇಂದ್ರ ಪ್ರಾರಂಭವಾಗಲಿದೆ ಎಂದರು. ಔಷಧಿ ಗುಣಮಟ್ಟದ ಬಗ್ಗೆ ಸುಳ್ಳುಗಳನ್ನು ಬಿತ್ತಲಾಗುತ್ತಿದೆ ಎಂದು ಶಾಸ್ತ್ರಿ ಅಪಾದಿಸಿದರು. ಇದನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಿ ಎಂದಾಗ ಸಿಇಓ ರೋಶನ್‌ ಸಹ ಈ ಬಗ್ಗೆ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಬೇಕು. ಇಲಾಖೆಯಿಂದ ಸಹ ಕಡಿಮೆ ದರದ ಸರ್ಕಾರಿ ಔಷಧಿ ಮಳಿಗೆಗಳ ಬಗ್ಗೆ ಜನರಲ್ಲಿ ಇರುವ ಸಂಶಯ ದೂರ ಮಾಡಿ ಎಂದು ಡಿಎಚ್‌ಓ ಅವರಿಗೆ ಆದೇಶಿಸಿದರು. ಅಂಕೋಲಾಕ್ಕೆ ಆರ್ಯುವೇದ ವೈದ್ಯರಿದ್ದಾರೆ. ಆದರೆ ಔಷಧಿ ಪೂರೈಕೆ ಇಲ್ಲ. ತಕ್ಷಣ ಔಷಧಿ ಕಳುಹಿಸಿ. ಎರಡು ವರ್ಷದಿಂದ ವೈದ್ಯರು ಆಸ್ಪತ್ರೆಗೆ ಬಂದು ಕುಳಿತುಕೊಂಡು ಹೋಗುವುದಾಗಿದೆ ಎಂದು ಸುಜಾತ ಗಾಂವಕರ್‌ ಜಿ.ಪಂ.ಗಮನಸೆಳೆದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ ನಾಯ್ಕ, ಸಂಜಯ್‌ ಹಣಬರ, ಜಯಮ್ಮ ಹಿರಳ್ಳಿ ಹಾಜರಿದ್ದರು.

loading...