ಸಕಲ ಸೇನಾ ಗೌರವದೊಂದಿಗೆ ಅನಂತಕುಮಾರ್ ಅಂತ್ಯ ಸಂಸ್ಕಾರ

0
0
loading...

ಬೆಂಗಳೂರು:ನಿನ್ನೆ ನಿಧನರಾದ ಕೇಂದ್ರ ಸಚಿವ ಹೆಚ್.ಎನ್. ಅನಂತಕುಮಾರ್ ಇಂದು ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅನಂತಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಶಾಸ್ತ್ರ ಸಂಪ್ರದಾಯ, ಪ್ರಾಯಶ್ಚಿತ್ತ ಸಂಕಲ್ಪ ಮಾಡುವ ಜೊತೆಗೆ ಸಕಲ ಸೇನಾ ಗೌರವದೊಂದಿಗೆ ಅನಂತಕುಮಾರ್ ಅಂತ್ಯ ಸಂಸ್ಕಾರ ನೆರವೇರಿತು.
ಸುಮಾರು 45 ನಿಮಿಷಗಳ ಕಾಲ ಬ್ರಾಹ್ಮಣ ಸಮುದಾಯದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ವೈದಿಕ ಧರ್ಮಶಾಸ್ತ್ರ ಪಂಡಿತ ಭಾನು ಪ್ರಕಾಶ್ ಶರ್ಮಾ ಅಂತಿಮ ವಿಧಿ ವಿಧಾನ ನಡೆಸಿಕೊಟ್ಟರು.
ಇನ್ನು ಚಿತೆಯ ಮೇಲೆ ಪಾರ್ಥಿವ ಶರೀರವಿಟ್ಟು ದಹ್ಯಮಾನ ಮಂತ್ರ ಪಠಣ ಮಾಡಿದ ಬಳಿಕ ಶವದ ಬಲಭಾಗಕ್ಕೆ ಅನಂತಕುಮಾರ್ ಸಹೋದರ ನಂದಕುಮಾರ್ ಅಗ್ನಿ ಸ್ಪರ್ಶ ಮಾಡಿದರು.
ಇದೇ ವೇಳೆ ಅಂತ್ಯ ಸಂಸ್ಕಾರದಲ್ಲಿ ಅನಂತ ಕುಮಾರ್ ಪತ್ನಿ ತೇಜಶ್ವಿನಿ ಅನಂತ ಕುಮಾರ್, ಪುತ್ರಿ ವಿಜೇತ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು. ಅನಂತಕುಮಾರ್ ಅವರ ಅಂತ್ಯಸಂಸ್ಕಾರಕ್ಕೆ ಗಣ್ಯರ ದಂಡೇ ಹರಿದು ಬಂದಿತ್ತು. ಬಿಜೆಪಿ ಹಿರಿಯ ನಾಯಕ, ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಅಗ್ನಿ ಸ್ಪರ್ಶಕ್ಕೂ ಮುನ್ನ ಗಣ್ಯರು ಅನಂತ ಕುಮಾರ್ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದಕ್ಕೂ ಮೊದಲು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಟ್ಟು ಅಲ್ಲಿಂದ ಮೆರವಣಿಗೆ ಮೂಲಕ ಚಾಮರಾಜಪೇಟೆ ರುದ್ರಭೂಮಿಗೆ ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ತರಲಾಯಿತು.
ಬೆಳಗ್ಗೆ 11 ರಿಂದ ನ್ಯಾಷನಲ್ ಕಾಲೇಜು ಮೈದಾನದ ಆವರಣದಲ್ಲಿ ಕೇಂದ್ರ ಸಚಿವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 12.15ಕ್ಕೆ ವಂದೇ ಮಾತರಂ ಗೀತೆ ಹಾಡುವ ಮೂಲಕ ಅಂತಿಮ ದರ್ಶನವನ್ನು ಅಂತಿಮಗೊಳಿಸಲಾಯಿತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಆರ್ ಎಸ್ ಎಸ್ ಸಹ ಕಾರ್ಯವಾಹ ಭಯ್ಯಾಜಿ ಜೋಷಿ,ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ಕೇಂದ್ರ ವಿಜ್ಞಾನ ಅರಣ್ಯ ಸಚಿವ ಹರ್ಷವರ್ಧನ್, ಕೇಂದ್ರ ಪೆಟ್ರೋಲಿಯಂ ಸಚಿವ ಧಮೇರ್ಂದ್ರ ಪ್ರಧಾನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಾಮಾಜಿಕ ನ್ಯಾಯ ರಾಜ್ಯ ಖಾತೆ ಸಚಿವ ರಾಮದಾಸ್ ಅಠವಾಲೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಂತಿಮ ನಮನ ಸಲ್ಲಿಸಿದರು.
ಜೊತೆಗೆ ಕರ್ನಾಟಕ ಸರ್ಕಾರದ ಪರವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಂತಿಮ ನಮನಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಆರ್.ಅಶೋಕ್, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ವಿ.ಸೋಮಣ್ಣ, ರವಿಕುಮಾರ್, ಸಂಸದರಾದ ಬಿಎಸ್.ರಾಘವೇಂದ್ರ, ಜಿಗಜಣಗಿ, ಯತ್ನಾಳ್, ಸುನಿಲ್ ಕುಮಾರ್ ಬಸವರಾಜ್ ಬೊಮ್ಮಾಯಿ, ಬಿ.ವೈ.ರಾಘವೇಂದ್ರ ಹಾಜರಿದ್ದರು. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಒಂದೇ ಮಾತರಂ ಗೀತೆ ನಂತರ ಪಾರ್ಥಿವ ಶರೀರವನ್ನು ಚಾಮರಾಜಪೇಟೆ ಹಿಂದೂ ರುದ್ರಭೂಮಿಯತ್ತ ಕೊಂಡೊಯ್ಯಲಾಯಿತು.
ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಬೆಳಗಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

loading...