ಹದಗೆಟ್ಟ ಕವಲಗಿ ರಸ್ತೆ ದುರಸ್ತಿಗೆ ಆಗ್ರಹ

0
0
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ತಾಲೂಕಿನ ತೆಲಗಿಯಿಂದ ಕವಲಗಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಈ ಕುರಿತು ಹಲವು ಬಾರಿ ಸಂಭಂದಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ರಸ್ತೆ ಡಾಂಬರೀಕರಣಕ್ಕೆ ಮುಂದಾಗುತ್ತಿಲ್ಲವೆಂದು ಕವಲಗಿ ಗ್ರಾಮದ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹೊನಕೇರಪ್ಪ ತೆಲಗಿ ಹಾಗೂ ರೈತ ಕಲ್ಲಪ್ಪ ಕುಂಬಾರ ದೂರಿದ್ದಾರೆ. ಜನ ಪ್ರತಿನಿಧಿಗಳು ಕೇವಲ ಚುನಾವಣೆ ಸಂಧರ್ಭದಲ್ಲಿ ಮಾತ್ರ ಹಳ್ಳಿಗಳಿಗೆ ಆಗಮಿಸಿ ಸಮಸ್ಯೆ ಆಲಿಸುತ್ತಾರೆ. ಚುನಾವಣೆ ಮುಗಿದ ನಂತರ ಹಳ್ಳಿಯ ಕಡೆಗೆ ತಲೆ ಹಾಕುವುದಿಲ್ಲ. ಈ ರಸ್ತೆ ಇಲ್ಲಿಯವರೆಗೂ ಲೋಕೋಪಯೋಗಿ ಇಲಾಖೆಗೆ ಸೇರಿರುವುದಿಲ್ಲ, ಕಳೆದ ೩೦ ವರ್ಷಗಳ ಹಿಂದೆ ಕವಲಗಿ ಗ್ರಾಮಕ್ಕೆ ರಸ್ತೆ ಇರಲಿಲ್ಲ, ಆ ಸಂಧರ್ಭದಲ್ಲಿ ಬರಗಾಲದ ಕಾಮಗಾರಿ ಅಡಿಯಲ್ಲಿ ರೈತರ ಜಮೀನುಗಳಲ್ಲಿ ರಸ್ತೆ ನಿರ್ಮಿಸಿದ್ದಾರೆ. ರಸ್ತೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಇಲ್ಲಿಯವರೆಗೂ ಪರಿಹಾರ ಕೂಡಾ ನೀಡಿರುವುದಿಲ್ಲ. ಜಮೀನು ಕಳೆದುಕೊಂಡ ರೈತರಿಗೆ ಯಾವ ಇಲಾಖೆಯವರಿಗೆ ಕೇಳಬೇಕೆಂಬುದು ತಿಳಿಯುತ್ತಿಲ್ಲ. ಮೊದಲು ಮಾಡಿದ ಡಾಂಬರೀಕರಣ ಸಂಪೂರ್ಣ ಕಿತ್ತಿಹೋಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು. ಪ್ರಯಾಣಿಕರಿಗೂ ತಂಬಾ ತೊಂದರೆಯಾಗುತ್ತಿದೆ. ಕೂಡಲೆ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡಿಸಿ, ರಸ್ತೆ ಡಾಂಬರೀಕರಣ ಮಾಡಿ ವಾಹನಗಳ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ಅನುವು ಮಾಡಿಕೊಡಬೇಕು ಹಾಗೂ ರಸ್ತೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಕೂಡಲೆ ಪರಿಹಾರ ಕೊಡಬೇಕೆಂದು ರೈತ ಮುಖಂಡ ಹೊನಕೇರಪ್ಪ ತೆಲಗಿ, ಕಲ್ಲಪ್ಪ ಕುಂಬಾರ ಒತ್ತಾಯಿಸಿದ್ದಾರೆ.

loading...