ಹಳಿಯಾಳ ತಾಲೂಕ ಕೇಂದ್ರದಲ್ಲಿ ಆರಂಭಗೊಂಡ ಮಾದರಿ ಕ್ರೀಡಾಂಗಣ

0
0
loading...

ನಾಗರಾಜ ಶಹಾಪುರಕರ
ಹಳಿಯಾಳ: ಹಲವಾರು ಕ್ರೀಡಾಪಟುಗಳಿಗೆ ನಿರಂತರ ಸಹಾಯ-ಸಹಕಾರದೊಂದಿಗೆ ಪ್ರೇರಣೆ ನೀಡುತ್ತಿರುವ ಕಂದಾಯ ಸಚಿವ ಮತ್ತು ಹಳಿಯಾಳ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ರಘುನಾಥರಾವ್‌ ದೇಶಪಾಂಡೆ ತಮ್ಮ ಸ್ವಕ್ಷೇತ್ರದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವು ಜಿಲ್ಲೆಯಲ್ಲಿಯೇ ಸುಸಜ್ಜಿತ ಏಕೈಕವಾಗಿದೆ.
ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು ಇವರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ವಿವಿಧ ಉದ್ಯಮಗಳ ಕೈಗಾರಿಕಾ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಇವುಗಳನ್ನು ಕ್ರೂಢೀಕರಿಸಿ ಒಟ್ಟು 240 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಯು ಈ ಸುಸಜ್ಜಿತ, ವ್ಯವಸ್ಥಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದೆ. ಒಟ್ಟು 816 ಚದರ್‌ ಮೀಟರ್‌ ವಿಸ್ತೀರ್ಣದ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಈ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಲಾಗಿದೆ. ಇಂತಹ ಒಳಾಂಗಣ ಕ್ರೀಡಾಂಗಣ ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾಂವ, ಹುಬ್ಬಳ್ಳಿ ಮೊದಲಾದ ಪ್ರಮುಖ ಮಹಾನಗರಗಳಲ್ಲಿ ಕಾಣಬಹುದಾಗಿದ್ದು, ಹಳಿಯಾಳದಂತಹ ಪುಟ್ಟ ತಾಲೂಕಾ ಕೇಂದ್ರದಲ್ಲಿ ಇಂತಹ ಒಂದು ಮಾದರಿ ಒಳಾಂಗಣ ಕ್ರೀಡಾಂಗಣವು ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಮ್ಮೆಯ ಕೇಂದ್ರವಾಗಿದೆ.
ಕಟ್ಟಿಗೆಯ ನೆಲಹಾಸು ಹೊಂದಿರುವ ಅತ್ಯಂತ ಎತ್ತರದ ಮೇಲ್ಛಾವಣಿಯೊಂದಿಗೆ 354 ಚದರ್‌ ಮೀಟರ್‌ ವಿಸ್ತೀರ್ಣದ ಬ್ಯಾಡ್ಮಿಂಟನ್‌ ಹಾಲ್‌ ವಿಶೇಷವಾಗಿದೆ. 105.60 ಚ.ಮೀ. ಅಳತೆಯ ಎರಡು ಕೊಠಡಿಗಳಲ್ಲಿ ಒಂದೆಡೆ ಟೇಬಲ್‌ ಟೆನ್ನಿಸ್‌, ಇನ್ನೊಂದೆಡೆ ಜಿಮ್ನಾಶಿಯಮ್‌ ಅವಕಾಶ ಕಲ್ಪಿಸಲಾಗಿದೆ. 87.75 ಚ.ಮೀ. ಕೊಠಡಿಯಲ್ಲಿ ಪ್ರತ್ಯೇಕವಾಗಿ ಕೇರಂ ಹಾಗೂ ಚೆಸ್‌ ಆಟ ಆಡಬಹುದಾಗಿದೆ. ಮಹಿಳೆಯ ಹಾಗೂ ಪುರುಷರಿಗೆ ಪ್ರತ್ಯೇಕವಾದ ಶೌಚಾಲಯಗಳು, ಕಾರ್ಯಾಲಯ, ಬ್ಯಾಗೇಜ್‌ ಸ್ಟೋರ್‌, ಪ್ರಥಮ ಚಿಕಿತ್ಸಾ ಕೊಠಡಿ ಹಾಗೂ ವೇಟಿಂಗ್‌ ರೂಮ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಕ್ರೀಡಾ ಅಭಿಮಾನಿಯಾಗಿದ್ದು, ತಮ್ಮ ಕ್ಷೇತ್ರದಿಂದ ಉತ್ತಮ ಸಾಧನೆಗೈಯಲಿರುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲು ದೂರದೃಷ್ಟಿತ್ವದಿಂದ ಈ ಒಳಾಂಗಣ ಕ್ರೀಡಾಂಗಣದಿಂದ ಪರಿಕಲ್ಪನೆ ಮಾಡಿದ ಸಚಿವ ಆರ್‌.ವಿ. ದೇಶಪಾಂಡೆ ಈ ಸದುದ್ದೇಶವನ್ನು ಈಡೇರಿಸಲು ತಮ್ಮ ವೈಯಕ್ತಿಕ ಆತ್ಮೀಯತೆ ಹಾಗೂ ಪ್ರಭಾವ ಬೀರಿದರು. ಪರಿಣಾಮವಾಗಿ ಒಟ್ಟು 240 ಲಕ್ಷ ರೂ. ಮೊತ್ತವನ್ನು ವಿಧಾನ ಪರಿಷತ್‌ನ ಮೂವರು ಸದಸ್ಯರು, ರಾಜ್ಯಸಭಾದ ನಾಲ್ವರು ಸದಸ್ಯರು ಇವರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ವಿವಿಧ ನಾಲ್ಕು ಪ್ರತಿಷ್ಠಿತ ಉದ್ಯಮಗಳ ಕೈಗಾರಿಕಾ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಇವುಗಳನ್ನು ಕ್ರೂಢೀಕರಿಸಲಾಯಿತು.
ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ:- ರಾಜ್ಯಸಭಾ ಸದಸ್ಯರಾದ ಉಪೇಂದ್ರ ರೆಡ್ಡಿ-25 ಲಕ್ಷ ರೂ., ರಾಮಮೂರ್ತಿ-20 ಲಕ್ಷ ರೂ., ಪ್ರಭಾಕರ ಕೋರೆ-15 ಲಕ್ಷ ರೂ., ಕೆ. ರೆಹಮಾನ ಖಾನ್‌-10 ಲಕ್ಷ ರೂ., ವಿಧಾನ ಪರಿಷತ್‌ ಸದಸ್ಯರಾದ ಭೋಸರಾಜ್‌-10 ಲಕ್ಷ ರೂ., ಎಂ. ಶ್ರೀನಿವಾಸ ಹಾಗೂ ಈರಣ್ಣಾ ಮತ್ತಿಗಟ್ಟಿ ತಲಾ 5 ಲಕ್ಷ ರೂ.
ಕೈಗಾರಿಕಾ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ:- ಟೋಯೊಟಾ ಕಿರ್ಲೋಸ್ಕರ್‌ ಮೋಟರ್ಸ್‌ ಪ್ರೈ.ಲಿ. ಬೆಂಗಳೂರು-55 ಲಕ್ಷ ರೂ., ಕಾರ್ಲೆ ಇನ್‌ಫ್ರಾ ಪ್ರೈ.ಲಿ.-50 ಲಕ್ಷ ರೂ., ಈಐಡಿ ಪ್ಯಾರಿ ಹಳಿಯಾಳ ಸಕ್ಕರೆ ಕಾರ್ಖಾನೆ-25 ಲಕ್ಷ ರೂ., ಎಂಆರ್‌ಪಿಎಲ್‌ ಮಂಗಳೂರು- 20 ಲಕ್ಷ ರೂ.
ಅಕ್ಟೋಬರ್‌ 31 ರಂದು ಲೋಕಾರ್ಪಣೆಗೊಂಡ ಈ ಒಳಾಂಗಣ ಕ್ರೀಡಾಂಗಣ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಿರ್ವಹಣಾ ಸಮಿತಿಯನ್ನು ರಚಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಇದು ತನ್ನ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹರಡಿಸುವದನ್ನು ನೋಡಬಹುದಾಗಿದ್ದು, ಕ್ರೀಡಾಪಟುಗಳ ಪಾಲಿನ ಶ್ರದ್ಧಾಕೇಂದ್ರವಾಗಿ ಬೆಳೆಯಲಿದೆ.

-: ಸಚಿವ ದೇಶಪಾಂಡೆಯವರ ವಿಶೇಷ ಇಚ್ಛಾಶಕ್ತಿ :-
”ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು ಇವರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ವಿವಿಧ ಉದ್ಯಮಗಳ ಕೈಗಾರಿಕಾ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಇವುಗಳನ್ನು ಕ್ರೂಢೀಕರಿಸಿ ಸಚಿವ ಆರ್‌.ವಿ. ದೇಶಪಾಂಡೆಯವರ ವಿಶೇಷ ಇಚ್ಛಾಶಕ್ತಿಯಿಂದ ಒಟ್ಟು 240 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಯು ಈ ಸುಸಜ್ಜಿತ, ವ್ಯವಸ್ಥಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ.” -ಆರ್‌.ಎಚ್‌. ಕುಲಕರ್ಣಿ, ಪ್ರಭಾರಿ ಕಾರ್ಯನಿರ್ವಾಹಕ ಇಂಜಿನೀಯರ್‌, ಪಿಡಬ್ಲ್ಯೂಡಿ ಇಲಾಖೆ.

loading...