ಉಣ್ಣಿಬಾವಿ ಶಾಲಾ ಮುಖ್ಯಗುರು ಅಮಾನತಿಗೆ ಆಗ್ರಹ

0
2
loading...

ನಿಡಗುಂದಿ: ಕರ್ತವ್ಯ ಲೋಪವೆಸಗಿದ್ದ ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಸಿ.ಸಜ್ಜನ ಇವರನ್ನು ಕೂಡಲೇ ಅಮಾನತು ಮಾಡಬೇಕೆಂದು ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಶಾಲಾ ಆವರಣದಲ್ಲಿ ಪ್ರತಿಭಟಿಸಿದರು.
ಸುದ್ದಿ ತಿಳಿದು ಶಾಲೆಗೆ ದೌಡಾಯಿಸಿದ ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಗುಳೇದಗುಡ್ಡ ಎದುರು ಕರವೇ ಕಾರ್ಯಕರ್ತರು ತೀವೃ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಆನಂದ ಹಡಗಲಿ, ಉಪಾಧ್ಯಕ್ಷ ಸತೀಶ ನರಸರೆಡ್ಡಿ, ಮುಖ್ಯ ಗುರು ಎಸ್.ಸಿ.ಸಜ್ಜನರಿಗೆ ಸಮಯ ಪರಿಪಾಲನೆ ಗೊತ್ತಿಲ್ಲ. ತಾವು ಗೈರು ಇದ್ದ ದಿನವೂ ಸೇರಿ ಭಾನುವಾರವೂ ಕೂಡ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕುತ್ತಿದ್ದರು. ಶಾಲೆ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸದೇ ಅನಗತ್ಯವಾಗಿ ಒಂದು ವರ್ಷಕ್ಕೂ ಧೀರ್ಘಕಾಲದ ರಜೆ ಪಡೆದಿದ್ದಾರೆ.

ಕಳೆದ ಜೂ.11 ರಂದು ಪುನಃ ಕರ್ತವ್ಯಕ್ಕೆ ಹಾಜರಾಗಲು ಬಂದಾಗಲೂ ಅವಕಾಶ ನೀಡದೇ ಪ್ರತಿಭಟಿಸಿದ್ದೇವು. ಈಗ ಮತ್ತೇ ತಾವು ಡಿ.3 ರಂದು ಶಾಲೆಗೆ ಹಾಜರಾಗಲು ಆದೇಶ ನೀಡಿರುವುದು ಸರಿಯಲ್ಲ. ಕರ್ತವ್ಯ ಲೋಪವೆಸಗಿದ್ದ ಈ ಮುಖ್ಯ ಶಿಕ್ಷಕರನ್ನು ನಮ್ಮ ಶಾಲೆಗೆ ಸೇರಿಸುವುದಿಲ್ಲ. ಕೂಡಲೇ ಇವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಬಸವನ ಬಾಗೇವಾಡಿ ಬಿಇಒ ಕಛೇರಿಗೆ ಕರವೇ ಕಾರ್ಯಕರ್ತರೆಲ್ಲ ಒಗ್ಗೂಡಿ ಮುತ್ತಿಗೆ ಹಾಕಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಮಂಜುನಾಥ್ ಗುಳೇದಗುಡ್ಡ ಕರವೇ ಕಾರ್ಯಕರ್ತರು ಮಾಡಿದ ಆರೋಪವನ್ನು ಇಲಾಖೆಯ ಮೇಳಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

ನಿಡಗುಂದಿ ವಲಯ ಶಿಕ್ಷಣ ಸಂಯೋಜಕ ವೀರಣ್ಣ ಜುಳಜುಳೆ, ಪ್ರಭಾರಿ ಮುಖ್ಯಗುರು ಎಂ.ಬಿ.ಮಿರಗಿ, ಕರವೇ ಗ್ರಾಮಘಟಕದ ಅಧ್ಯಕ್ಷ ಎಚ್.ಎಚ್.ಪಟೇಲ, ನಾಗಭೂಷಣ ನರಸರೆಡ್ಡಿ, ಮಲ್ಲೇಶಪ್ಪ ಕೋನರೆಡ್ಡಿ, ಸುರೇಶ ನರಸರೆಡ್ಡಿ, ಇಮಾಮಪೀರ ಮುಲ್ಲಾ, ವಿಶ್ವನಾಥ ನರಸರೆಡ್ಡಿ, ಸಂಗನಗೌಡ ಕೋನರೆಡ್ಡಿ, ರಾಜು ಮಯ್ಯಾಪುರ, ಮುತ್ತುರಾಜ್ ಹಾಲಿಹಾಳ, ಬಸವರಾಜ್ ಕೋನರೆಡ್ಡಿ, ಸಂತೋಷ ಕೋನರೆಡ್ಡಿ, ರಮೇಶ ನರಸರೆಡ್ಡಿ ಮತ್ತಿತರರು ಇದ್ದರು.
ಶಾಲೆ ಬೀಗ ತೆರೆಯಲು ಅಡ್ಡಿ: ಮುಖ್ಯ ಗುರು ಎಸ್.ಸಿ.ಸಜ್ಜನ ಅಮಾನತಿಗೆ ಆಗ್ರಹಿಸಿದ ಕರವೇ ಕಾರ್ಯಕರ್ತರು ಬೆಳಿಗ್ಗೆ ಶಾಲೆಯ ಬೀಗ ತೆರೆಯಲೂ ಕೆಲ ಹೊತ್ತು ಅವಕಾಶ ಕೊಡಲಿಲ್ಲ. ಸಜ್ಜನ ಇವರನ್ನು ಪುನಃ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಿದ್ದೇ ಆದಲ್ಲಿ ಉಣ್ಣಿಬಾವಿ ಗ್ರಾಮಕ್ಕೆ ಶಾಲೆಯೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಬಿಇಒ ಎಂ.ಎ.ಗುಳೇದಗುಡ್ಡ ಮಧ್ಯಸ್ಥಿಕೆ ವಹಿಸಿ ಗೇಟ್ ತೆಗೆಸಿ ಕೊಂಚ ತಡವಾಗಿ ಮಕ್ಕಳಿಂದ ಪ್ರಾರ್ಥನೆ ಮಾಡಿಸಿದರು.

loading...