ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳ ನಿರ್ಮಾಣ: ಸಂಚಾರಕ್ಕೆ ತೊಂದರೆ

0
1
loading...

 

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಕಲಭಾಗ ಗ್ರಾಮ ಪಂಚಾಯತದ ಅಳ್ವೆಕೋಡಿಯ ಕರುಣಾಮಯ ಕೊಪೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಐಆರ್‍ಬಿ ಕಂಪನಿಯವರು ಶೀಘ್ರದಲ್ಲಿ ಹೆದ್ದಾರಿಗೆ ಬಿದ್ದಿರುವ ಹೊಂಡಗಳನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷ ವಿರೂಪಾಕ್ಷ ನಾಯ್ಕ ನೇತ್ರತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ, ಐಆರ್‍ಬಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡಗಳಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಈ ಹೊಂಡಗಳನ್ನು ತಪ್ಪಿಸಲು ಹೋಗಿ ಬಹುತೇಕ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೇ ಹೊಂಡದ ಮೇಲೆ ವಾಹನಗಳು ಸಂಚರಿಸುವುದರಿಂದ ಭಾರೀ ಪ್ರಮಾಣದಲ್ಲಿ ಗಡ ಗಡ ಎನ್ನುವ ಶಬ್ಧ ಗೋಚರಿಸುತ್ತದೆ. ಈ ಶಬ್ಧದಿಂದ ಸುತ್ತ ಮುತ್ತಲು ವಾಸವಾಗಿರುವ ಜನರಿಗೆ ದಿನನಿತ್ಯ ಕಿರಿಕಿರಿ ಉಂಟಾಗಿದೆ. ಅಲ್ಲದೇ ಹೆದ್ದಾರಿ ಪಕ್ಕದ ಎರದುಬಿದಿ ಇಕ್ಕಳಗಳಲ್ಲಿ ಮಣ್ಣು ಸವಕಳಿಯಾಗಿ ಸುಮಾರು ಒಂದುವರೆ ಅಡಿಯಷ್ಟು ಆಳ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಹೆದ್ದಾರಿ ಪಕ್ಕದಲ್ಲಿ ವಾಹನವನ್ನು ಇಳಿಸಲು ಕಷ್ಟವಾಗಿದೆ. ಈಗಾಗಲೇ ಅನೇಕ ಬೈಕ್ ಸವಾರರು ಬಿದ್ದು ಗಭೀರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಐಆರ್‍ಬಿ ಕಂಪನಿ ಅಧಿಕಾರಿಗಳು ಶ್ರೀಘ್ರದಲ್ಲಿ ಹೆದ್ದಾರಿಗೆ ಬಿದ್ದಿರುವ ಹೊಂಡಗಳನ್ನು ಮುಚ್ಚಬೇಕು ಹಾಗೂ ಹೆದ್ದಾರಿ ಪಕ್ಕದಲ್ಲಿ ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿಯನ್ನು ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಐಆರ್‍ಬಿ ಕಂಪನಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಸ್ಥಳೀಯರಾದ ದೇವರಾಯ ನಾಯ್ಕ, ಪಿಲೋಮಿನಾ ಡಿಸೋಜಾ, ಮತ್ತೇಸ ಫರ್ನಾಂಡಿಸ್, ಶೇಷಗಿರಿ ಶಾನಭಾಗ, ಬಾಬು ಮುಕ್ರಿ, ಚಂದ್ರಕಾಂತ ಗಾವಡಿ, ಪುರುಷೋತ್ತಮ ಶಾನಭಾಗ, ಸಂತೋಷ ಡಿಸೋಜಾ, ಸಿರಿಲ್ ಡಾಯಸ್, ಡೆಲನ್ ಡಿಸೋಜಾ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...