ರೈತರು ಜಾನುವಾರುಗಳನ್ನು ಹತಾಶೆಯಾಗಿ ಮಾರಾಟ ಮಾಡದಂತೆ ಕ್ರಮ

0
3
loading...

ಬಾಗಲಕೋಟೆ: ಜಿಲ್ಲೆಯಲ್ಲಿ ಮೇವಿನ ತೊಂದರೆ ಬಗ್ಗೆ ಖುದ್ದು ಭೇಟಿ ನೀಡಿ, ರೈತರು ಜಾನುವಾರುಗಳನ್ನು ಹತಾಶೆಯಾಗಿ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಬರ ನಿರ್ವಹಣೆ ಕುರಿತ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂತೆವಾರು, ತಾಲೂಕುವಾರು ಖುದ್ದು ಭೇಟಿ ನೀಡಿ ರೈತರು ಹತಾಶೆಯಾಗಿ ಜಾನುವಾರುಗಳನ್ನು ಮಾರಾಟ ಮಾಡದಂತೆ ಕ್ರಮ ವಹಿಸಲು ಸೂಚಿಸಿದರು. ಮೇವು ಬ್ಯಾಂಕ್‍ಗಳನ್ನು ತಾಲೂಕಿಗೆ ಒಂದರಂತೆ ಸ್ಥಾಪನೆ ಮಾಡಬೇಕು. ಒಂದು ಮೇವು ಬ್ಯಾಂಕ್‍ಗೆ ಸದ್ಯ 10 ಟನ್ ಮೇವನ್ನು ಆಯಾ ತಾಲೂಕು ಎ.ಪಿ.ಎಂ.ಸಿಗಳಲ್ಲಿ ಸಂಗ್ರಹಿಸಿ ಸರ್ಕಾರ ನಿಗದಿಪಡಿಸಿದ ರಿಯಾಯಿತಿ ದರದಲ್ಲಿ ಅವಶ್ಯವಿರುವ ರೈತರಿಗೆ ಖರೀದಿಸಲು ಅನುಕೂಲವಾಗುವಂತೆ ಕ್ರಮವಹಿಸಲು ತಿಳಿಸಿದರು. ಜಾನುವಾರುಗಳಿಗೆ ನೀರಿನ ಸಮಸ್ಯೆ ಕಂಡುಬಂದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಹಕಾರದೊಂದಿಗೆ ನೀರಿನ ತೊಟ್ಟಿ ನಿರ್ಮಿಸಿ ನೀರು ಪೂರೈಸಲು ಸೂಚಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಮೇವಿನ ಸ್ಥಿತಿಗತಿಗಳ ವಿವರಣೆ ನೀಡುತ್ತಾ, ಜಿಲ್ಲೆಯಲ್ಲಿ ಲಭ್ಯವಿರುವ ಒಣ ಮೇವು ಜಿಲ್ಲೆಯಲ್ಲಿರುವ ಒಟ್ಟು 514217 ಜಾನುವಾರುಗಳಿಗೆ ಅನುಗುಣವಾಗಿ ಸರಾಸರಿ 21 ವಾರಗಳಿಗೆ ಸಾಕಾಗುವುದು. ಜಮಖಂಡಿ, ಮುಧೋಳ ತಾಲೂಕುಗಳಲ್ಲಿ ಈಗಾಗಲೇ ಕಬ್ಬು ಕಟಾವಣೆ ಪ್ರಾರಂಭವಾಗಿದ್ದು, ಕಬ್ಬಿನ ಸೊಗೆಯ(ಮೇವು) ಸೇರಿ ಇವುಗಳೊಂದಿಗೆ ಒಣ ಬೇಸಾಯದ ತಾಲೂಕುಗಳಾಗಿರುವ ಬಾದಾಮಿ, ಬಾಗಲಕೋಟ, ಹುನಗುಂದಗಳಿಗೆ ಸದ್ಯಕ್ಕೆ ತೊಂದರೆ ಇರುವುದಿಲ್ಲ. ಆದರೆ ಇಲ್ಲಿಯ ಮೇವು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೊರ ಹೋಗದಂತೆ ತಡೆಗಟ್ಟಿದಲ್ಲಿ ಮೇವಿನ ಸಮಸ್ಯೆಯಾಗುವುದಿಲ್ಲವೆಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಆರ್.ಎಸ್.ಪದರಾ, ಡಾ.ಶ್ರೀಕಾಂತ ಸಬನೀಸ್, ಡಾ.ಎಚ್.ಎಸ್.ಅಂಗಡಿ, ಡಾ.ಸುಬ್ರಮಣ್ಯ ಹೆಗಡೆ, ಡಾ.ಗೋವಿಂದ ರಾಠೋಡ, ಡಾ.ಎಸ್.ಡಿ.ಆವಟಿ, ಡಾ.ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

loading...