ವಿದ್ಯಾರ್ಥಿಗಳು ಜ್ಞಾನ, ಕ್ರೀಡೆಯಲ್ಲಿ ಮುಂದಾಗಿ: ಶ್ರೀಗಳು

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ವಿದ್ಯಾರ್ಥಿಗಳು ಜ್ಞಾನ ಮತ್ತು ಕ್ರೀಡೆಯಲ್ಲಿ ಮುಂದಿದ್ದರೆ ಬೌಧಿಕ ಹಾಗೂ ಶಾರೀರಿಕವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಆದಿಚುಂಚನಗಿರಿಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ನುಡಿದರು.
ಶ್ರೀಗಳು ಶುಕ್ರವಾರ ಪಟ್ಟಣದ ಸಿವಿಎಸ್‍ಕೆ ಪ್ರೌಢ ಶಾಲೆಯ ಸಭಾಭವನದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ರೌಪ್ಯ ಮಹೋತ್ಸವದ ಅಂಗವಾಗಿ ದಿವಂಗತ ಬಿ ಕೆ ಭಂಡಾರಕರ್ ಸ್ಮರಣಾರ್ಥ ಜ್ಞಾನಾಮೃತ ಕಾರ್ಯಕ್ರಮ ಮತ್ತು ಜಿಲ್ಲಾ ಮಟ್ಟದ ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ರಸಪ್ರಶ್ನೆ ಸ್ಪರ್ಧೆಯು ಮಕ್ಕಳಲ್ಲಿ ಜ್ಞಾನವರ್ಧನೆಗೆ ಸಹಾಯಕಾರಿಯಾಗುತ್ತದೆ. ಶಿಕ್ಷಕರು ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ನೋಡಿಕೊಂಡರೆ ಖಂಡಿತ ಎಲ್ಲ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಸಹಾಯಕಾರಿಯಾಗುತ್ತದೆ. ಇದರಿಂದ ಶಿಕ್ಷಕರು ಕೂಡ ಆದರ್ಶ ಶಿಕ್ಷಕರಾಗಲು ಸಾಧ್ಯ ಎಂದು ಶ್ರೀಗಳು ನುಡಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಮುರಳೀಧರ ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 25 ವರ್ಷಗಳ ಯಶಸಿನತ್ತ ನಮ್ಮ ಶಿಕ್ಷಣ ಸಂಸ್ಥೆ ಹೆಜ್ಜೆಯಿಟ್ಟಿರುವುದು ಸಂತಸದ ಸಂಗತಿಯಾಗಿದೆ. ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಈ ಕಾರ್ಯಕ್ರಮದ ಕಳೆ ಹೆಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಯಾಗಿ ಕಿರಣ ಫರ್ನಾಂಡಿಸ್ ಶಿರಸಿ ಪಾಲ್ಗೊಂಡಿದ್ದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ವಿಠ್ಠಲ ಆರ್ ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದರು. ವಿದ್ಯಾರ್ಥಿ ತೇಜಶ್ವಿನಿ ಪ್ರಾರ್ಥಿಸಿದರು. ಶಿಕ್ಷಕರಾದ ಚಿದಾನಂದ ಭಂಡಾರಿ ಸ್ವಾಗತಿಸಿದರು. ಗಣೇಶ ಜೋಶಿ ನಿರೂಪಿಸಿದರು. ಪ್ರಾಂಶುಪಾಲೆ ಸುಲೋಚನಾ ರಾವ್ ವಂದಿಸಿದರು.

loading...