ಹೇಡ್ ಬಂದರ್ ಬೀಚ್‍ನಲ್ಲಿ ಸ್ವಚ್ಚತಾ ಕಾರ್ಯ

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಅವರ ನೇತೃತ್ವದಲ್ಲಿ ಪುರಸಭೆ ವತಿಯಿಂದ ರವಿವಾರ ಕುಮಟಾದ ಹೇಡ್ ಬಂದರ್ ಬೀಚ್‍ನಲ್ಲಿ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ, ಪರಿಸರ ಅಭಿಯಂತರರು, ಸಿಬ್ಬಂದಿ, ಪೌರಕಾರ್ಮಿಕರು, ಉಪವಿಭಾಗಾಧಿಕಾರಿಗಳ ಕಚೇರಿ ಸಿಬ್ಬಂದಿ, ಪುರಸಭೆ ವ್ಯಾಯಾಮ ಶಾಲೆ ಸದಸ್ಯರು, ಶಶಿಹಿತ್ತಲ್, ಐಡಿಯಲ್, ವನ್ನಳ್ಳಿ ಶಾಲಾ ಶಿಕ್ಷಕ-ವಿದ್ಯಾರ್ಥಿಗಳು ಹಾಗೂ ಪರಿಸರ ಜಾಗೃತಿ ಸಂಘದ ಸದಸ್ಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಅಲ್ಲದೇ ಸಮುದ್ರ ತೀರ ಸ್ವಚ್ಛತೆ ಮಾಡುವುದರೊಂದಿಗೆ ಇನ್ನು ಮುಂದೆ ಇಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವ ಬಗ್ಗೆ ಎಚ್ಚರಿಕೆ ಫಲಕಗಳು ಹಾಗೂ ಸೂಚನಾ ಬರಹಗಳನ್ನು ಬರೆಯಲಾಯಿತು. ಬಯಲು ಮಲ ವಿಸರ್ಜನೆ ಮಾಡದಂತೆ ಸೂಚಿಸಲಾಯಿತು. ವನ್ನಳ್ಳಿ ಸಮುದ್ರ ತೀರದಲ್ಲಿ ನಿರಂತರ ನಿಗಾ ವಹಿಸಲಾಗುವುದು. ಸ್ವಚ್ಛತೆಯನ್ನು ಹಾಳು ಮಾಡುವವರಿಗೆ 500 ರೂ ರಿಂದ 5000 ರೂ ವರೆಗೆ ದಂಡ ವಿಧಿಸುವ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಯಿತು.

ಪರಿಸರ ಅಭಿಯಂತ ನಾಗೇಂದ್ರ ಗಾಂವಕರ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹಣೆ ಜಾರಿಯಲ್ಲಿದ್ದರೂ ಕಳೆದ ಒಂದು ವರ್ಷದಿಂದ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ 200 ಜನರಿಗೆ ದಂಡ ವಿಧಿಸಿ 50,000 ಸಾವಿರ ರೂ ವಸೂಲಿ ಮಾಡಲಾಗಿದೆ. 300 ಜನರಿಗೆ ನೋಟೀಸ ನೀಡಲಾಗಿದೆ. ಕಳೆದ 14 ತಿಂಗಳಲ್ಲಿ ಪ್ರತಿ ತಿಂಗಳು ಸಂಗ್ರಹವಾದ ಒಣ ಕಸವನ್ನು ಹರಾಜು ಮಾಡಲಾಗಿದ್ದು 75 ಸಾವಿರರೂ ಆದಾಯ ಗಳಿಸಲಾಗಿದೆ. ಹಸಿ ಕಸದಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಮೂಲಕ 15 ಸಾವಿರರೂ ಗಳಿಸಲಾಗಿದೆ. ಅಲ್ಲದೇ ಈಗಾಗಲೇ ಕುಮಟಾ ಪಟ್ಟಣದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಜಾರಿಯಲ್ಲಿದೆ. ಆದರೆ ಹೆಚ್ಚಿನ ಜನರು ಬೆಳಿಗ್ಗೆ 7:30 ರಿಂದ 9 ಗಂಟೆಯ ಒಳಗೆ ಕಸ ಸಂಗ್ರಹಣೆ ವಾಹನ ಬರಬೇಕೆಂದು ಒತ್ತಾಯಿಸುತ್ತಾರೆ. ಆದರೆ ಪುರಸಭೆಗೆ ಸೀಮಿತ ವಾಹನ ಮಂಜೂರು ಇದ್ದು ಹೆಚ್ಚಿನ ವಾಹನ, ಸಿಬ್ಬಂದಿ ಆರ್ಥಿಕವಾಗಿ ಕಾರ್ಯಸಾಧು ಅಲ್ಲ. ಆದ್ದರಿಂದ ಜನರು ಮನೆಯಲ್ಲಿ ಹಸಿ ಕಸವನ್ನು ಮರ ಗಿಡಗಳಿಗೆ ಹಾಕಿ ಒಣ ಕಸವನ್ನು ಮನೆಯ ಮುಂದೆ ಪ್ರಾಣಿಗಳು ಹರಡದಂತೆ ಸಿಮೆಂಟ್ ಕುಂಡದಲ್ಲಿ ಮುಚ್ಚಿ ಇಟ್ಟರೆ ಸಾಕು. ಪುರಸಭೆ ಸಿಬ್ಬಂದಿ ಬಂದು ಕಸವನ್ನು ಒಯ್ಯುತ್ತಾರೆ. ಇದರಿಂದ ಒಬ್ಬರನ್ನೊಬ್ಬರು ಕಾಯುವುದು ತಪ್ಪುತ್ತದೆ. ಆದ್ದರಿಂದ ಎಲ್ಲರೂ ಈ ಸುಲಭ ಉಪಾಯ ಅನುಸರಿಸಲು ಕರೆ ನೀಡಿದರು.

loading...