ಇಂದಿನಿಂದ ಮೂರು ದಿನ ಕೊಡುಗು ಉತ್ಸವ

0
0
loading...

ಮಡಿಕೇರಿ:- ಕಳೆದ ವರ್ಷ ಭಾರೀ ಮಳೆ, ಪ್ರವಾಹ, ಮತ್ತು ಭೂಕುಸಿತದಿಂದ ನಲುಗಿಹೋಗಿದ್ದ ಕೊಡಗಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕೊಡಗಿನ ಉತ್ಸವ ಜರುಗಲಿದೆ.
ಕೊಡಗಿನ ಆಹಾರ ಪದ್ಧತಿ, ಕೊಡಗಿನ ಪರಂಪರೆ, ಕೊಡಗು ದೇಶಕ್ಕೆ ಕೊಟ್ಟ ಕೊಡುಗೆ, ಕೊಡವರ ವೇಷಭೂಷಣಗಳು ಬದುಕಿನ ರೀತಿಯನ್ನು ಉತ್ಸವದಲ್ಲಿ ಬಿಂಬಿಸಲಾಗುತ್ತಿದೆ.
ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಇದನ್ನು ಜಂಟಿಯಾಗಿ ಹಮ್ಮಿಕೊಂಡಿದೆ.
ಮೈಸೂರು ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಂತಹ ಉತ್ಸವಗಳು ಸಹಕಾರಿಯಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಆದರೆ ಹಂಪಿ ಉತ್ಸವ ಆಚರಣೆ ಮೊದಲು ಕೊಡಗಿನ ಉತ್ಸವ ಆಚರಣೆ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೂ ಕಾರಣವಾಗಿದೆ. ಬರದ ಹಿನ್ನಲೆಯಲ್ಲಿ ಹಂಪಿ ಉತ್ಸವವನ್ನು ಸರ್ಕಾರ ಮುಂದೂಡಿದೆ. ಆದರೆ ಕೊಡಗಿನ ಉತ್ಸವ ಮಾಡುವುದಕ್ಕೆ ಬರ ಅಡ್ಡಿಯಾಗಿಲ್ಲವೇ ಎಂದು ಬಳ್ಳಾರಿಯ ಕೆಲವು ಬಿಜೆಪಿ ಶಾಸಕರು ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಂಪಿ ಉತ್ಸವದ ದಿನಾಂಕ ಪ್ರಕಟಿಸಬೇಕು ಎಂದು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಹಂಪಿಯಿಂದ ಬೆಂಗಳೂರಿಗೆ ಪಾದಯತ್ರೆ ಹಮ್ಮಿಕೊಳ್ಳುವುದಾಗಿ ಶಾಸಕ ಜಿ. ಸೋಮಶೇಖರ್ ಹೇಳಿದ್ದರು. ಇದಲ್ಲದೆ ಭಿಕ್ಷೆ ಬೇಡಿಯಾದರೂ ಹಂಪಿ ಉತ್ಸವಕ್ಕೆ ಹಣ ಸಂಗ್ರಹ ಮಾಡಿಕೊಡುವುದಾಗಿಯೂ ಹೇಳಿದ್ದರು. ಆದರೆ ಸರ್ಕಾರ ಹಂಪಿ ಉತ್ಸವ ದಿನಾಂಕ ಪ್ರಕಟ ಮಾಡುವ ಗೊಡವೆಗೇ ತಲೆಕೆಡಿಸಿಕೊಳ್ಳದೇ ಇಂದಿನಿಂದ ಮೂರು ದಿನಗಳ ಕೊಡಗು ಉತ್ಸವ ನಡೆಸಲಿದೆ.

loading...