ಒತ್ತಡ ನಿಭಾಯಿಸುವುದನ್ನು ಕಲಿತಿದ್ದೇನೆ: ವಿಜಯ್‌ ಶಂಕರ್‌

0
0
loading...

ಅಡಿಲೇಡ್‌:- ಕಳೆದ ನ್ಯೂಜಿಲೆಂಡ್‌ ‘ಎ’ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಅನುಭವ ಸಿಕ್ಕಿದೆ. ಕಠಿಣ ಸಂದರ್ಭಗಳಲ್ಲಿ ಒತ್ತಡ ನಿಭಾಯಿಸುವುದನ್ನು ಕಿವೀಸ್‌ ನೆಲದಲ್ಲಿ ಕಲಿತ್ತಿದ್ದೇನೆ. ಮತ್ತೊಮ್ಮೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿರುವುದನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದು ತಮಿಳುನಾಡಿನ ವಿಜಯ್‌ ಶಂಕರ್‌ ಹೇಳಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿನ ವಿವಾದಾತ್ಮಕ ಹೇಳಿಕೆ ಸಂಬಂಧ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌ ರಾಹುಲ್‌ ಅವರನ್ನು ತಂಡದಿಂದ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಅವರ ಬದಲು ಆಲ್‌ರೌಂಡರ್‌ ವಿಜಯ್‌ ಶಂಕರ್‌ ಹಾಗೂ ಶುಭ್‌ಮನ್‌ ಗಿಲ್‌ಗೆ ಅವಕಾಶ ನೀಡಲಾಯಿತು.
“ಭಾರತ ತಂಡದ ಬಾಗಿಲು ತನಗೆ ಮತ್ತೊಮ್ಮೆ ತೆರೆದಿರುವುದರಿಂದ ಉತ್ಸಾಹಭರಿತನಾಗಿದ್ದೇನೆ. ಶನಿವಾರ ರಾತ್ರಿ ಪತ್ರಕರ್ತರು ಕರೆ ಮಾಡಿ ಈ ವಿಷಯ ಹೇಳುತ್ತಿದ್ದಂತೆ ತಳಮಳ ಉಂಟಾಯಿತು. ತಂಡದ ಗೆಲುವಿಗೆ ವೈಯುಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುವತ್ತ ಗಮನಹರಿಸುತ್ತೇನೆ. ಕಳೆದ ಬಾರಿ ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದು, ಅಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಈಗ ಕಲಿತಿದ್ದೇನೆ” ಎಂದು ತಿಳಿಸಿದರು.
ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರು ನಿದ್ಹಾಸ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ 20 ಓವರ್‌ಗಳಿಗೆ 167 ರನ್‌ ಅಗತ್ಯವಿದ್ದಾಗ ಕ್ರೀಸ್‌ನಲ್ಲಿ ಇದ್ದ ವಿಜಯ್‌ ಶಂಕರ್‌ 19 ಎಸೆತಗಳಿಗೆ 17 ರನ್ ಗಳಿಸಿದ್ದರು. ಈ ವೇಳೆ ದಿನೇಶ್‌ ಕಾರ್ತಿಕ್‌ ತಂಡವನ್ನು ಗೆಲ್ಲಿಸಿಕೊಡುವ ಮೂಲಕ ವಿಜಯ್‌ ಅವರ ವಿರುದ್ಧದ ಟೀಕೆಗಳಿಂದ ಅವರನ್ನು ಪಾರು ಮಾಡಿದ್ದರು. ಇದಾದ ಬಳಿಕ, ವಿಜಯ್‌ ಶಂಕರ್‌ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಟೀಕೆಗಳ ಸುರಿಮಳೆಯೇ ಸುರಿದಿತ್ತು. ನಂತರ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ನ್ಯೂಜಿಲೆಂಡ್‌ ‘ಎ’ ವಿರುದ್ಧ ಸರಣಿಯಲ್ಲಿ ವಿಜಯ್‌ ಶಂಕರ್‌ ಅವರು 87*, 59 ಹಾಗೂ 42 ರನ್‌ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹಾರ್ದಿಕ್‌ ಪಾಂಡ್ಯ ಸ್ಥಾನಕ್ಕೆ ಆಯ್ಕೆಮಾಡಲಾಗಿದೆ.
ಮುಂದಿನ ವಿಶ್ವಕಪ್‌ ಆಡುವ ಕುರಿತು ಚಿಂತಿಸಿಲ್ಲ. ಆದರೆ, ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುವುದರ ಕಡೆ ಗಮನಹರಿಸುತ್ತೇನೆ. ಪ್ರಸ್ತುತ ಆಡುತ್ತಿರುವ ಹಂತದಲ್ಲೆ ಖುಷಿಯಾಗಿ ಆಡುತ್ತೇನೆ ಎಂದು ವಿಜಯ್‌ ಶಂಕರ್‌ ಹೇಳಿದರು.

loading...