ಕೂಡಲಸಂಗಮದಲ್ಲಿ ಶರಣ ಮೇಳ ಆಯೋಜನೆ

0
2
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಸಿಖ್ಖ ಧರ್ಮಿಯರಿಗೆ ಅಮೃತಸರ, ಬೌದ್ಧರಿಗೆ ಬುದ್ದಗಯಾ, ಮುಸಲ್ಮಾನರಿಗೆ ಮೆಕ್ಕಾ, ಲಿಂಗಾಯತ ಧರ್ಮಿಯರಿಗೆ ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮವು ಪವಿತ್ರ ಸ್ಥಳವಾಗಿದೆ ಪ್ರತಿಯೊಬ್ಬ ಬಸವಧರ್ಮ ಅನುಯಾಯಿ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಚನ್ನಬಸವೇಶ್ವರ ಪೀಠದ ಜಗದ್ಗುರು ಚನ್ನಬಸವಾನಂದ ಸ್ವಾಮೀಗಳು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.11, 12, 13, 14 ರಂದು ಮೇಳವನ್ನು ನಡೆಸುತ್ತಿದ್ದು, ಅಂದು ಲಿಂಗಾಯತ ಧರ್ಮದ ಸ್ಥಾಪನೆಗಾಗಿ ಹಕ್ಕೊತ್ತಾಯಕ್ಕಾಗಿ ಲಿಂಗಾಯತ ಮಠಾಧೀಶರ ಸಮ್ಮುಖದಲ್ಲಿ ವಿವಿಧ ವೈಚಾರಿಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30 ಕ್ಕೆ ಉಳವಿ ಬಸವಧಾಮದ ಚನ್ನಬಸವಾನಂದ ಸ್ವಾಮೀಜಿ ಮೇಳವನ್ನು ಉದ್ಘಾಟಿಸಲಿದ್ದು ರಾಜೆಂದ್ರ ಜೊನ್ನೀಕೇರಿ ಧ್ವಜಾರೋಹಣ ಮಾಡುವರು. ಜಗನ್ಮಾತಾ ಅಕ್ಕಮಹಾದೇವಿ ಅನುಭವ ಪೀಠದ ಗಂಗಾದೇವಿ ಅವರು ಆದಿ ಪ್ರಥಮರ ಪೂಜೆ ಮಾಡುವರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಡಾ.ಶಿವನಗೌಡ ಪಾಟಿಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ನ್ಯಾಯವಾದಿ ಗಂಗಶೆಟ್ಟಿ ಪಾಟಿಲ ಸಭಾಧ್ಯಕ್ಷತೆ ವಹಿಸಿಕೊಳ್ಳುವರು ಈ ಸಂದರ್ಭದಲ್ಲಿ ವಿವಿಧ ಗಣ್ಯರು ವಿಷಯ ಮಂಡನೆ ಮಾಡುವರು ಎಂದರು. ಜ.12 ರಂದು ಬೆಳಿಗ್ಗೆ 10.30 ಕ್ಕೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದರೆ ಆಗುವ ಪ್ರಯೋಜನಗಳ ಕುರಿತು, ಸಂಜೆ 6.30 ಕ್ಕೆ ಲಿಂಗಾಯತ ಧರ್ಮ ಹೋರಾಟದ ಮುಂದಿನ ನಡೆ ಕುರಿತು ಚಿಂತನೆ ನಡೆಯಲಿದೆ. ಜ.13 ರಂದು ಶರಣ ಮೇಳ ಉದ್ಘಾಟನೆಯಾಗಲಿದೆ. ಹಾಗೂ ಹೊಸವರ್ಷದ ಕ್ಯಾಲೇಂಡರ್ ಬಿಡುಗಡೆಯಾಗಲಿದೆ.
ಶರಣ ರತ್ನ ಪ್ರಶಸ್ತಿ ನಾಲ್ವರು ಸಾಧಕರಿಗೆ ನೀಡಲಾಗುವುದು. ಅಂದು ಮಾತೆ ಮಹಾದೇವಿ ಅವರ ಇಪ್ಪತ್ತೇಳನೇ ಪೀಠಾರೋಹಣದ ಮಹೋತ್ಸವ ನಡೆಯಲಿದೆ ಎಂದರು. ಜ.14 ರಂದು ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ಕಾರ್ಯಕ್ರಮ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆದು ತದನಂತರ ಸಾಮೂಹಿಕ ಇಷ್ಟಲಿಂಗಾರ್ಚನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುವುದು. ಈ ಭಾರಿ ಹೆಚ್ಚು ಬಸವಭಕ್ತರು ಭಾಗವಹಿಸುವ ನೀರಿಕ್ಷೆಯಿದ್ದು ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ, ಎಸ್.ಬಿ.ಜೋಡಳ್ಳಿ, ಪ್ರಕಾಶ ಗರಗ, ಶಿವಾನಂದ ಅಬಲೂರ ಇದ್ದರು.

loading...