ಖವಾಜ, ಹ್ಯಾಂಡ್ಸ್‌ಕೊಂಬ್‌, ಮಾರ್ಷ್‌ ತಲಾ ಅರ್ಧ ಶತಕ: ಭಾರತಕ್ಕೆ 289 ರನ್‌ ಸವಾಲಿನ ಗುರಿ

0
0
loading...

ಸಿಡ್ನಿ, ಜ 12 (ಯುಎನ್‌ಐ) ಪೀಟರ್‌ ಹ್ಯಾಂಡ್ಸ್‌ಕೊಂಬ್‌ ( 73 ರನ್‌, 61 ಎಸೆತ), ಉಸ್ಮಾನ್‌ ಖವಾಜ (59 ರನ್‌, 81 ಎಸೆತ) ಹಾಗೂ ಶಾನ್‌ ಮಾರ್ಷ್‌ (54 ರನ್‌ 70 ಎಸೆತ) ಅವರ ಮೂರು ಅರ್ಧ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 288 ರನ್‌ ದಾಖಲಿಸಿದ್ದು, ಭಾರತಕ್ಕೆ 289 ರನ್‌ ಸವಾಲಿನ ಗುರಿ ನೀಡಿದೆ.

ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ಆ್ಯರೊನ್‌ ಫಿಂಚ್‌ ಹಾಗೂ ಅಲೆಕ್ಸ್‌ ಕರಿ ಜೋಡಿ ಆರಂಭದಲ್ಲೇ ಬೇರ್ಪಟ್ಟಿತ್ತು. 6 ರನ್‌ ಗಳಿಸಿ ಆಡುತ್ತಿದ್ದ ಫಿಂಚ್‌, ಭುವನೇಶ್ವರ್‌ ಕುಮಾರ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್ ಆದರು. ನಂತರ ಮತ್ತೊಂದು ತುದಿಯಲ್ಲಿ ಆಡುತ್ತಿದ್ದ ಅಲೆಕ್ಸ್ ಕೇವಲ 24 ರನ್‌ ಗಳಿಸಿ ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು.
ಖವಾಜ-ಮಾರ್ಷ್‌ ಜುಗಲ್‌ಬಂದಿ:
ಆಸ್ಟ್ರೇಲಿಯಾ ತಂಡ 41 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜತೆಯಾದ ಉಸ್ಮಾನ್‌ ಖವಾಜ ಹಾಗೂ ಶಾನ್‌ ಮಾರ್ಷ್‌ ಜೋಡಿ ಭಾರತದ ಬೌಲರ್‌ಗಳನ್ನು ಮೆಟ್ಟಿ ನಿಂತಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 92 ರನ್‌ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಆ ಮೂಲಕ ಆಸ್ಟ್ರೇಲಿಯಾ 100ರ ಗಡಿ ದಾಟಲು ಸಾಧ್ಯವಾಯಿತು.

ಅಮೋಘ ಬ್ಯಾಟಿಂಗ್‌ ಮಾಡಿದ ಉಸ್ಮಾನ್‌ ಖವಾಜ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 81 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ ಒಟ್ಟು 59 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ನಂತರ, ಇವರು ರವೀಂದ್ರ ಜಡೇಜಾ ಎಸೆತದಲ್ಲಿ ಎಲ್ಬಿಡಬ್ಲ್ಯುಗೆ ಬಲಿಯಾದರು.

ನಂತರ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಶಾನ್‌ಮಾರ್ಷ್‌ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ಎದುರಿಸಿದ 70 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 54 ರನ್‌ ಗಳಿಸಿ ವೃತ್ತಿ ಜೀವನದ 13ನೇ ಅರ್ಧ ಶತಕ ಸಿಡಿಸಿದರು. ಬಳಿಕ, ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು.
ಸ್ಫೋಟಿಸಿದ ಹ್ಯಾಂಡ್ಸ್ ಕೊಂಬ್‌:
ಕ್ರೀಸ್‌ಗೆ ಬಂದ ಕ್ಷಣದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮೊರೆ ಹೋದ ಪೀಟರ್‌ ಹ್ಯಾಂಡ್ಸ್‌ಕೊಂಬ್ ಭಾರತದ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. 61 ಎಸೆತಗಳಲ್ಲಿ ಅವರು 2 ಸಿಕ್ಸರ್‌ ಹಾಗೂ 6 ಬೌಂಡರಿಯೊಂದಿಗೆ ಒಟ್ಟು 73 ರನ್‌ ಗಳಿಸುವ ಮೂಲಕ ತಂಡದ ಮೊತ್ತ 250ರ ಗಡಿ ದಾಟಲು ನೆರವಾದರು. ಬಳಿಕ ಅವರು, ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು.

ಅಂತಿಮ ಓವರ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಮಾರ್ಕೂಸ್‌ ಸ್ಟೋನಿಸ್‌ 43 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್‌ ಹಾಗೂ ಬೌಂಡರಿಯೊಂದಿಗೆ ಅಜೇಯ 47 ರನ್‌ ಗಳಿಸಿದರು. ಮತ್ತೊಂದು ತುದಿಯಲ್ಲಿ ಗ್ಲೇನ್ ಮ್ಯಾಕ್ಸವೆಲ್‌ 11 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಭುವನೇಶ್ವರ್‌ ಕುಮಾರ್‌ 10 ಓವರ್‌ಗಳಿಗೆ 66 ರನ್‌ ಗಳಿಸಿ 2 ವಿಕೆಟ್‌ ಪಡೆದರೆ, ಕುಲ್ದೀಪ್‌ ಯಾದವ್‌ 10 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್‌ ಕಬಳಿಸಿದರು.

loading...