ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತ: ಆರೋಪ

0
2
loading...

 

ಕನ್ನಡಮ್ಮ ಸುದ್ದಿ-ಮುಂಡಗೋಡ: ಪಟ್ಟಣದ ದಸ್ತಗೀರಿಯಾ ಅನುದಾನಿತ ಉರ್ದು ಪ್ರೌಢಶಾಲೆಯ ಮಕ್ಕಳಿಗೆ ನೀಡುವ ಊಟವು ಪ್ರಾಣಿಗಳು ತಿನ್ನುವ ಆಹಾರಕ್ಕಿಂತಲೂ ಕೀಳು ಮಟ್ಟದ್ದಾಗಿರುತ್ತದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿ ಶನಿವಾರ ಮಧ್ಯಾಹ್ನ ಶಾಲಾಭಿವೃದ್ದಿ ಸಮಿತಿಯವರು ಹಾಗೂ ಸ್ಥಳಿಯರು ಶಾಲೆಯ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡರು.
ಮಕ್ಕಳಿಗೆ ಪೌಷ್ಟಿಕ ಮತ್ತು ಶುಚಿ-ರುಚಿಯಾದ ಆಹಾರವನ್ನು ನೀಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಸಿಯೂಟ ನೀಡುವ ಯೋಜನೆಯನ್ನು ಹಾಕಿಕೊಂಡಿದೆ. ಇದಕ್ಕನುಗುಣವಾಗಿ ಬೇಕಾದ ಆಹಾರ ಸಾಮಗ್ರಿಗಳನ್ನು ಖರೀದಿಸಿ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ನೀಡುವ ಜವಾಬ್ದಾರಿಯನ್ನು ಶಾಲಾ ಸಿಬ್ಬಂದಿಗೆ ವಹಿಸಿದೆ. ಆದರೆ ಇಲ್ಲಿನ ದಸ್ತಗೀರಿಯಾ ಉರ್ದು ಪ್ರೌಢಶಾಲೆಯಲ್ಲಿ ಸುಮಾರು 256ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇಂದು ಬಿಸಿಯೂಟಕ್ಕಾಗಿ ಮಾಡಿದ ಪಲಾವ ನಲ್ಲಿ ಕೇವಲ ಅನ್ನ ಮತ್ತು ಅರಶಿಣಪುಡಿ ಬಿಟ್ಟರೆ ಬೇರೇನೂ ಇಲ್ಲದೇ ಇದ್ದರು ಅನಿವಾರ್ಯವಾಗಿ ವಿದ್ಯಾರ್ಥಿಗಳು ತಿನ್ನುವ ಪ್ರಸಂಗ ಬಂದೊದಗಿತು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯೂ ಇದ್ದು ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕೇವಲ ಶೇ.42ರಷ್ಟು ಫಲಿತಾಂಶವಾಗಿದೆ. ಕ್ರೀಡಾಕೂಟದಲ್ಲಿ ಯಾವ ವಿದ್ಯಾರ್ಥಿಗಳೂ ಭಾಗವಹಿಸದೇ ಯಾವ ಒಂದು ಬಹುಮಾನ ಕೂಡ ಬಂದಿಲ್ಲ. ತಾಲೂಕಿನಲ್ಲಿ ಈ ಹಿಂದೆ ಶೇ.100ರಷ್ಟು ಫಲಿತಾಂಶ ಪಡೆಯುತ್ತಿದ್ದ ಈ ಶಾಲೆ ಇಂದು ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೇ ಉತ್ತಮ ಆಹಾರ ನೀಡುವಲ್ಲಿ ಕೂಡ ವಿಫಲವಾಗಿದೆ. ಈ ಬಗ್ಗೆ ಹಲವಾರು ಬಾರಿ ಶಾಲೆಯ ಮುಖ್ಯಸ್ಥರ ಗಮನಕ್ಕೆ ತರಲಾಗಿತ್ತು ಆದರೆ ಅವರು ಈ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ. ಇಲ್ಲಿನ ಆಹಾರ ಸಾಮಗ್ರಿಗಳು ರಾತೋರಾತ್ರಿ ಮಾರಾಟ ಮಾಡಿಕೊಂಡ ಬಗ್ಗೆ ಮಾಹಿತಿಯೂ ದೊರೆತಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರೂ ಕೂಡ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಅಕ್ತರ ರಝಾ ಈ ಕುರಿತು ಮಾತನಾಡಿ: ವಿದ್ಯಾರ್ಥಿಗಳಿಗೆ ಸರಿಯಾದ ಬಿಸಿಯೂಟ ನೀಡುವುದಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಯಲ್ಲಿ ಇಂದು ಭೇಟಿ ನೀಡಿದಾಗ ಪಲಾವ ನಲ್ಲಿ ಅನ್ನ ಮತ್ತು ಅರಶಿಣಪುಡಿ ಬಿಟ್ಟರೆ ಬೇರೇನೂ ಹಾಕಿರಲಿಲ್ಲ. ಇವರು ನೀಡುವ ಆಹಾರ ನಾಯಿಯೂ ಕೂಡ ತಿನ್ನುವುದಿಲ್ಲ. ಸರ್ಕಾರ ನೀಡಿದ ಆಹಾರ ಸಾಮಗ್ರಿ ಬೇರೆಡೆಗೆ ದಾಸ್ತಾನು ಆಗುತ್ತಿದೆ ಎಂಬ ಅನುಮಾನವೂ ಇದೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಶಾಲೆಯ ಉಸ್ತುವಾರಿ ಇರುವ ದಾಂಡೇಲಿ ಮುಸ್ಲಿಂ ಎಜುಕೇಶನ್ ಸೊಸೈಟಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಶಾಲೆಯ ಹತ್ತಿರ ಸುಳಿದಿಲ್ಲ. ನಮ್ಮ ಸಮಾಜದ ವತಿಯಿಂದ ಸಹಕಾರ ನೀಡುತ್ತೇವೆ ಎಂದು ಹೇಳಿದರೂ ಸ್ಪಂದಿಸಿಲ್ಲ. ಅದೂ ಅಲ್ಲದೇ ಇಲ್ಲಿ 4ಜನ ಶಿಕ್ಷಕರ ಕೊರತೆ ಇದೆ. ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಖಾಸಗಿ ಶಾಲೆ ಎಂದು ಹಾರಿಕೆ ಉತ್ತರ ನೀಡಿ ಬಿಇಒ ನುಣುಚಿಕೊಳ್ಳುತ್ತಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಸೈಯದ್ ಮೆಹಬೂಬ ಮಾತನಾಡಿ,: ಪ್ರತಿ ದಿನ ನಾನು ಬಿಸಿಯೂಟದ ಅಡುಗೆಯನ್ನು ಪರಿಶೀಲಿಸುತ್ತೇನೆ. ಆದರೆ ಇವತ್ತು ನನಗೆ ನೋಡಲು ಸಾಧ್ಯವಾಗಲಿಲ್ಲ.
ಹಾಗಾಗಿ ಈ ರೀತಿಯಾಗಿದೆ. ಇಲ್ಲಿನ ಶಿಕ್ಷಕರೂ ಊಟ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಚೆನ್ನಾಗಿ ಬಿಸಿಯೂಟ ನಡೆಸುವ ಪ್ರಯತ್ನ ನಾವಂತೂ ಮಾಡುತ್ತಿದ್ದೇವೆ. ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ ಮಾತನಾಡಿಮ ಪ್ರತಿ ದಿನ ಒಬ್ಬ ವಿದ್ಯಾರ್ಥಿಗೆ 2ರೂ.1ಪೈಸೆಯಂತೆ ಶಾಲೆಯ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತದೆ. ಅದರಂತೆ ನಿಯಮಾನುಸಾರ ಮಕ್ಕಳ ಸಂಖ್ಯೆಯ ಅನುಗುಣವಾಗಿ ಖರ್ಚನ್ನು ಹಾಕಬೇಕು. ಇವರು ಯಾವ ರೀತಿ ಖರ್ಚು ಹಾಕಿದ್ದರೆಂಬ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

loading...