ಜೂನ್ ಒಳಗಾಗಿ ನೀರು ಪೂರೈಕೆ ಯೋಜನೆ ಪೂರ್ಣ: ಮಹಾಂತೇಶ

0
3
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ: ನಿರಂತರ ನೀರು ಪೂರೈಕೆ ಯೋಜನೆಯ ಸಾಧಕ-ಬಾಧಕಗಳ ಕುರಿತು ಈಗಾಗಲೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. 2020ರ ಜೂನ್ ಒಳಗಾಗಿ 24*7 ನೀರು ಪೂರೈಕೆ ಯೋಜನೆ ಪೂರ್ಣಗೊಳ್ಳಲಿದ್ದು ಗುತ್ತಿಗೆದಾರ ಕಂಪನಿಯು ಎಂಟು ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ ಎಂದು ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್. ಹೇಳಿದರು.
ಸ್ಥಳೀಯ ನಗರಸಭೆ, ನೀಡ್ಸ್ ಸಂಸ್ಥೆ, ಕೆಯುಐಡಿಎಫ್‍ಸಿ, ಓಬಿಎ, ಎನ್ಕೆಯುಎಸ್‍ಐಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ನೀಡ್ಸ್ ಸಂಸ್ಥೆಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಲಾಗಿದ್ದ ನಿರಂತರ ನೀರು ಪೂರೈಕೆ ಯೋಜನೆ ಮತ್ತು ಒಳಚರಂಡಿ ಯೋಜನೆಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ದಿನದ 24 ಗಂಟೆ ನೀರು ಪೂರೈಸುವ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು ಮಾರ್ಚ್ ತಿಂಗಳಿನಲ್ಲಿ ಪ್ರಾಯೋಗಿಕವಾಗಿ ಒಂದು ಪ್ರದೇಶದಲ್ಲಿ ಅದಕ್ಕೆ ಚಾಲನೆ ನೀಡಲಾಗುವುದು ಎಂದರು. ಇದೇ ಕಂಪನಿಯು ಬಾಗಲಕೋಟೆ ಜಿಲ್ಲೆ ಇಲ್‍ಕಲ್ಲನಲ್ಲಿ ನಿರಂತರ ನೀರು ಪೂರೈಕೆ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಯೋಜನೆಯ ಸಲುವಾಗಿ ಹಾಳಾಗಿರುವ ನಗರದ ರಸ್ತೆಗಳನ್ನು ವಾರ್ಡ್‍ವಾರು ದುರಸ್ತಿ ಮಾಡಲಾಗುವುದು. ಇದರ ಜತೆಯಲ್ಲಿ ಒಳಚರಂಡಿ ಯೋಜನೆಯೂ ಪೂರ್ಣಗೊಂಡಿದ್ದು ಜನರು ತಮ್ಮ ವೈಯಕ್ತಿಕ ಶೌಚಾಲಯಗಳಿಗೆ ಅದರ ಸಂಪರ್ಕ ಪಡೆದುಕೊಂಡು ನಗರವನ್ನು ಸ್ವಚ್ಛವಾಗಿರಿಸಲು ಕೈಜೋಡಿಸಬೇಕು ಎಂದರು. ಕೆಯುಐಡಿಎಫ್‍ಸಿಯ ಸಿ.ರವಿ, ಉಮೇಶ ಮುತ್ತಪ್ಪನವರ, ಪ್ರಭುದೇವ ಮುಂಡಾಸದ, ಡಾ.ಸಿದ್ದೇಗೌಡ, ಶಿವಕುಮಾರ ಕೆ., ಜಿಲ್ಲಾ ಭೂ ಹಕ್ಕುದಾರರ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರಗೌಡ ಪಾಟೀಲ, ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ಸರೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನೀಡ್ಸ್ ಸಂಸ್ಥೆಯ ಸಿಇಒ ಎಚ್.ಎಫ್.ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ಪಾಟೀಲ, ಡಿ.ಟಿ.ಹೂಲಿಹಳ್ಳಿ, ತಿಪ್ಪೇಶ ಹಾಗೂ ನೀಡ್ಸ್ ಸಂಸ್ಥೆಯ ಸಿಬ್ಬಂದಿ ಇದ್ದರು.

loading...