ನಾಪತ್ತೆಯಾದ ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ

0
0
loading...

 

ಕನ್ನಡಮ್ಮ ಸುದ್ದಿ-ಕಾರವಾರ: ಮೀನುಗಾರಿಕೆಗೆ ತೆರಳಿದ್ದಾಗ ನಾಪತ್ತೆಯಾದ ಎಂಟು ಮೀನುಗಾರರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರವಿವಾರ ಇಲ್ಲಿನ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಡಿ.13 ರಂದು “ಸುವರ್ಣ ತ್ರಿಭುಜ” ಮೀನುಗಾರಿಕಾ ಬೋಟ್ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ ಉತ್ತರಕನ್ನಡ ಜಿಲ್ಲೆಯ ಐವರು ಮೀನುಗಾರರು ಸೇರಿದಂತೆ ಒಟ್ಟು 8 ಜನರಿದ್ದರು. ಆ ನಂತರ ನಿಗೂಢವಾಗಿ ಮೀನುಗಾರಿಕಾರ ಬೋಟ್ ಸಮೇತ ಇವರೆಲ್ಲರೂ ಕಣ್ಮರೆಯಾಗಿದ್ದರು. ಇವರನ್ನು ಕೂಡಲೇ ಪತ್ತೆ ಹಚ್ಚುವಂತೆ ಆಗ್ರಹಿಸಿ ಮೀನುಗಾರ ಸಂಘಟನೆಗಳು ಇಂದು ರವಿವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲೂ ಸಹ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಬೆಂಬಲ ಸೂಚಿಸಿ ಇಲ್ಲಿನ ಮೀನುಗಾರರು ಸಹ ರವಿವಾರ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದರು. ಬೈತಖೋಲ ಬಂದರಿನಲ್ಲಿ ಮೀನುಗಾರ ಸಂಘಟನೆಗಳೆಲ್ಲರೂ ಸೇರಿ ಟೈರ್‍ಗೆ ಬೆಂಕಿ ಹಚ್ಚಿದರು. ಮೀನುಗಾರರ ಪತ್ತೆಗೆ ನಿರ್ಲಕ್ಷ ತೋರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಕಾರವಾರ-ಅಂಕೋಲಾ ಟ್ರಾಲರ್ ಬೋಟ್ ಯೂನಿಯನ್, ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರಿಕೃತ ಬೋಟ್, ಮೀನುಗಾರರ ಸಹಕಾರಿ ಸಂಘ, ಬೈತಖೋಲ್ ಹರಿಕಂತ್ರ ಮೀನುಗಾರರ ಸೇವಾ ಸಂಘ, ಬೈತಖೋಲ ಟ್ರಾಲರ್ ಬೋಟ್ ಮಾಲಕರ ಸಂಘ ಕೈಜೋಡಿಸಿದೆ. ಬೈತಖೋಲ ಬಂದರಿನಿಂದ ಇಂದು ಯಾವುದೇ ದೋಣಿಗಳು ಸಮುದ್ರಕ್ಕೆ ಇಳಿದಿಲ್ಲ.

ಈ ಸಂದರ್ಭದಲ್ಲಿ ಕಾರವಾರ-ಅಂಕೋಲಾ ಟ್ರಾಲ್ ಬೊಟ್ ಯೂನಿಯನ್‍ನ ಅಧ್ಯಕ್ಷ ಚಿತ್ರಾಂಗ ತಾಂಡೇಲ, ಬೈತಖೋಲ ಹರಿಕಂತ್ರ ಮೀನುಗಾರರ ಸೇವಾ ಸಂಘದ ಅಧ್ಯಕ್ಷ ಉಮಾಕಾಂತ ದುರ್ಗೇಕರ, ಬೈತಖೋಲ ಬಂದರು ನಿರಾಶ್ರಿತರ ಸಂಘದ ಅಧ್ಯಕ್ಷ ದುಲ್ಯಾ ದುರ್ಗೇಕರ ಹಾಗೂ ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ ಮತ್ತು ಇನ್ನಿತರರು ಇದ್ದರು.

loading...