ನಾಳೆ ಎರಡನೇ ಏಕದಿನ ಪಂದ್ಯ: ಗೆಲುವಿನ ಒತ್ತಡದಲ್ಲಿ ಟೀಂ ಇಂಡಿಯಾ

0
0
loading...

ಅಡಿಲೇಡ್‌:- ಮೊದಲ ಏಕದಿನ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿರುವ ಭಾರತ ತಂಡ, ನಾಳೆ ನಡೆಯುವ ಎರಡನೇ ಹಣಾಹಣಿಯಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ನಾಳೆ ಅಂಗಳಕ್ಕೆ ಇಳಿಯಲಿದೆ. ಇನ್ನು, ಎರಡು ವರ್ಷಗಳ ಬಳಿಕ, ಭರ್ಜರಿ ಗೆಲುವು ಪಡೆದಿರುವ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತುಡಿತದಲ್ಲಿದೆ. ಉಭಯ ತಂಡಗಳ ಈ ಕಾದಾಟಕ್ಕೆ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.
ಅಡಿಲೇಡ್‌ ಮೈದಾನದಲ್ಲಿ ಉಭಯ ತಂಡಗಳು 2012 ಫೆಬ್ರವರಿಯಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ, ಗೌತಮ್ ಗಂಬೀರ್‌ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಜಯ ಸಾಧಿಸಿತ್ತು.
ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮಾ ಹಾಗೂ ಮಹೇಂದ್ರ ಸಿಂಗ್‌ ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ನಾಯಕ ಕೊಹ್ಲಿ, ಧವನ್‌, ರಾಯುಡು ಹಾಗೂ ಕಾರ್ತಿಕ್‌ ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಈಗಾಗಲೇ ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಪಡೆದಿದೆ. ಹಾಗಾಗಿ, ಭಾರತ ಸರಣಿ ಉಳಿಸಿಕೊಳ್ಳಬೇಕಾದರೆ ನಾಳಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಬೌಲಿಂಗ್‌ ವಿಭಾಗದಲ್ಲಿ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಎಡಗೈ ವೇಗಿ ಖಲೀಲ್‌ ಅಹಮದ್‌ ಅವರ ಬದಲು ಯಜುವೇಂದ್ರ ಚಾಹಲ್‌ ಅಥವಾ ಸಿದ್ಧಾರ್ಥ್‌ ಕೌಲ್‌ಗೆ ಅವಕಾಶ ನೀಡಬಹುದಾಗಿದೆ. 54ಕ್ಕೆ 2 ವಿಕೆಟ್‌ ಕಬಳಿಸಿದ್ದ ಕುಲ್ದೀಪ್‌ ಯಾದವ್‌ ಅವರನ್ನು ಈ ಪಂದ್ಯದಲ್ಲೂ ಮುಂದುವರಿಸುವ ಸಾಧ್ಯತೆ ಇದೆ.
ಭುವನೇಶ್ವರ್‌ ಕುಮಾರ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಅವರನ್ನು ಮುಂದುವರಿಸಬಹುದು.
ಇನ್ನೂ ಆಸ್ಟ್ರೇಲಿಯಾ ಆಡಿರುವ 23 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಆಸೀಸ್‌, ಸರಣಿ ಗೆಲುವಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.
ಕಳೆದ ಪಂದ್ಯದಲ್ಲಿ ಸಿಡಿದಿದ್ದ ಪೀಟರ್‌ ಹ್ಯಾಂಡ್ಸ್‌ಕೊಂಬ್‌, ಶಾನ್ ಮಾರ್ಷ್ ಹಾಗೂ ಮಾರ್ಕೂಸ್‌ ಸ್ಟೋನಿಸ್‌ ಅವರ ಮೇಲೆ ಮಧ್ಯಮ ಕ್ರಮಾಂಕದಲ್ಲಿ ಈ ಪಂದ್ಯದಲ್ಲೂ ನಿರೀಕ್ಷೆ ಇಡಲಾಗಿದೆ. ಆದರೆ, ಆರಂಭಿಕರಾದ ನಾಯಕ ಆ್ಯರೊನ್ ಫಿಂಚ್‌ ಸತತ ವೈಫಲ್ಯದಿಂದ ನಿರಾಸೆ ಅನುಭವಿಸಿದ್ದಾರೆ. ಉಸ್ಮಾನ್‌ ಖವಾಜ ಅಥವಾ ಅಲೆಕ್ಸ್‌ ಇವರಲ್ಲಿ ಒಬ್ಬರು ನಾಯಕನೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ನಾಲ್ಕು ವಿಕೆಟ್‌ ಕಿತ್ತು ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್‌ ಮಾಡಿದ್ದ ಜಾಯ್‌ ರಿಚರ್ಡ್ಸ್ ಸನ್‌ ಈ ಪಂದ್ಯದಲ್ಲೂ ಭಾರತಕ್ಕೆ ಆಘಾತ ನೀಡಲು ಸಜ್ಜಾಗಿದ್ದಾರೆ. ಇವರಿಗೆ, ಬೆಹ್ರನ್‌ಡ್ರಾಪ್‌, ಮಾರ್ಕೂಸ್‌ ಸ್ಟೋನಿಸ್‌ ಸಾಥ್‌ ನೀಡುವುದು ಖಚಿತ.

ಸಂಭಾವ್ಯ ಆಟಗಾರರು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು / ಕೇದಾರ ಜಾಧವ್, ರವೀಂದ್ರ ಜಡೇಜಾ , ಎಂ.ಎಸ್.ಧೋನಿ (ವಿ.ಕೀ), ಭುವನೇಶ್ವರ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಯುಜುವೇಂದ್ರ ಚಾಹಲ್.
ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ (ವಿ.ಕೀ), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕೊಂಬ್, ಮಾರ್ಕಸ್ ಸ್ಟೋನಿಸ್ , ಗ್ಲೇನ್ ಮ್ಯಾಕ್ಸ್‌ವೆಲ್‌, ನಥಾನ್ ಲಿಯಾನ್, ಪೀಟರ್ ಸಿಡ್ಲೆ, ಜಾಯ್ ರಿಚರ್ಡ್ಸನ್, ಮತ್ತು ಜೇಸನ್ ಬೆಹ್ರನ್‌ಡ್ರಾಫ್.

ಸಮಯ: ಬೆಳಗ್ಗೆ 08:50
ಸ್ಥಳ: ಅಡಿಲೇಡ್‌ ಓವಲ್‌ ಮೈದಾನ, ಅಡಿಲೇಡ್‌

loading...