ನಾಳೆ ರಣಜಿ ಟ್ರೋಫಿ 3ನೇ ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕೆ ರಾಜಸ್ತಾನ ಸವಾಲು

0
0
loading...

ಬೆಂಗಳೂರು:- ಕಳೆದ ಮೂರು ಆವೃತ್ತಿಗಳಲ್ಲಿ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದ ಕರ್ನಾಟಕ ತಂಡ, ಪ್ರಸಕ್ತ ಆವೃತ್ತಿಯ ಗುಂಪು ಹಂತದಲ್ಲಿ ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಹಾದಿಯತ್ತ ಸಾಗಿದೆ. ನಾಳೆ 2018-19ನೇ ಸಾಲಿನ 3ನೇ ಕ್ವಾರ್ಟರ್‌ ಫೈನಲ್‌ನಲ್ಲಿ ವಿನಯ್‌ ಪಡೆ, ರಾಜಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಉಭಯ ತಂಡಗಳ ಕಾದಾಟಕ್ಕೆ ರಾಜಧಾನಿಯ ಚಿನ್ನಸ್ವಾಮಿ ಮೈದಾನದಲ್ಲಿ ವೇದಿಕೆ ಸಿದ್ಧವಾಗಿದೆ.
ಕರ್ನಾಟಕ ಎಲೈಟ್‌ ‘ಎ’ ಗುಂಪು ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಪಡೆದಿದ್ದು, ಎರಡರಲ್ಲಿ ಸೋತು ಇನ್ನುಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಆ ಮೂಲಕ ಕರ್ನಾಟಕ ಗುಂಪು ಪಟ್ಟಿಯಲ್ಲಿ 27 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನು, ಎದುರಾಳಿ ರಾಜಸ್ತಾನ ತಂಡ ಪ್ರಸಕ್ತ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದು, ಎರಡರಲ್ಲಿ ಡ್ರಾ ಕಂಡಿದೆ. ಆ ಮೂಲಕ ರಾಜಸ್ತಾನ , ಎಲೈಟ್ ‘ಸಿ’ ಗುಂಪು ಪಟ್ಟಿಯಲ್ಲಿ 51 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದೆ.
ಕರ್ನಾಟಕ ಇದುವರೆಗೂ 8 ಬಾರಿ ರಣಜಿ ಟ್ರೋಫಿ ಚಾಂಪಿಯನ್‌ ಆಗಿದ್ದು, ರಾಜಸ್ತಾನ ಕೇವಲ ಎರಡು ಬಾರಿ ಮಾತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮೂರನೇ ಬಾರಿ ಕಣ್ಣಿಟ್ಟಿರುವ ರಾಜಸ್ತಾನ ತಂಡ ಕರ್ನಾಟಕವನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸುವ ಕನಸಿನೊಂದಿಗೆ ನಾಳೆ ಅಂಗಳಕ್ಕೆ ಕಾಲಿಡಲಿದೆ. ತವರು ನೆಲ ಪ್ರಯೋಜನ ಪಡೆಯಲಿರುವ ಕರ್ನಾಟಕ, ಪಂದ್ಯ ಗೆದ್ದು ಅಂತಿಮ 4ರ ಘಟ್ಟಕ್ಕೆ ಪ್ರವೇಶ ಪಡೆಯುವ ತುಡಿತದಲ್ಲಿದೆ.
ಕಳೆದ ಬಾರಿ ಕರ್ನಾಟಕ ವಿದರ್ಭ ಎದುರು ಸೆಮಿಫೈನಲ್‌ ಪಂದ್ಯದಲ್ಲಿ ಕೇವಲ 5 ರನ್‌ಗಳಿಂದ ಸೋಲುವ ಮೂಲಕ ತೀವ್ರ ನಿರಾಸೆಗೆ ಒಳಗಾಗಿತ್ತು. 2013-14 ಹಾಗೂ 2014-15 ಆವೃತ್ತಿಯಲ್ಲಿ ಸತತ ಎರಡು ಬಾರಿ ಕರ್ನಾಟಕ ರಣಜಿ ಚಾಂಪಿಯನ್‌ ಆಗಿ ಬೀಗಿತ್ತು. ಇದಾದ ಬಳಿಕ ಇಲ್ಲಿಯವರೆಗೂ ಫೈನಲ್‌ ಹಂತಕ್ಕೆ ತಲುಪುವಲ್ಲಿ ವಿಫಲವಾಗಿದೆ.
ವಿನಯ್‌ ಪಡೆಯ ಬ್ಯಾಟಿಂಗ್‌ ವಿಭಾಗದಲ್ಲಿ ಕರುಣ್‌ ನಾಯರ್‌, ರವಿಕುಮಾರ್ ಸಮರ್ಥ್‌, ಡಿ. ನಿಶ್ಚಲ್‌, ಮನೀಶ್‌ ಪಾಂಡೆ, ಎಸ್‌, ಶರತ್‌ ಅವರ ಬಲವಿದ್ದು, ಬೌಲಿಂಗ್‌ ವಿಭಾಗದಲ್ಲಿ ನಾಯಕ ವಿನಯ್‌ ಕುಮಾರ್‌, ರೋನಿತ್‌ ಮೋರೆ, ಅಭಿಮನ್ಯು ಮಿಥುನ್ ಅವರ ಬಲವಿದೆ. ಸ್ಪಿನ್ ವಿಭಾಗದಲ್ಲಿ ಕೆ, ಗೌತಮ್‌ ಹಾಗೂ ಶ್ರೇಯಸ್ ಗೋಪಾಲ್ ಅವರ ಮೋಡಿ ಮಾಡಲಿದ್ದಾರೆ.

ತಂಡಗಳು
ಕರ್ನಾಟಕ:
ವಿನಯ್ ಕುಮಾರ್ (ಸಿ), ರವಿಕುಮಾರ್ ಸಮರ್ಥ್, ಶರತ್ ಬಿ.ಆರ್ (ವಿ.ಕೀ), ಕರುಣ್ ನಾಯರ್, ಶ್ರೇಯಾಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಮನೀಶ್ ಪಾಂಡೆ, ಜಗದೀಶ ಸುಚಿತ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ಪ್ರಸಿದ್ಧ ಕೃಷ್ಣ, ಅಭಿಮನ್ಯು ಮಿಥುನ್, ಪವನ್ ದೇಶ್‌ಪಾಂಡೆ, ಪ್ರತೀಕ್ ಜೈನ್, ಶ್ರೀನಿವಾಸ್ ಶರತ್ .

ರಾಜಸ್ತಾನ:
ಮಹಿಪಾಲ್ ಲೋಮ್ರೂರ್ (ನಾಯಕ), ಚೇತನ್ ಬಿಸ್ತ್‌ (ವಿ.ಕೀ), ಅಮಿತ್‌ ಕುಮಾರ್ ಗೌತಮ್, ರಾಬಿನ್ ಬಿಸ್ತ್‌, ಅಶೋಕ್ ಮೆನಾರಿಯಾ, ರಾಜೇಶ್ ಬಿಷ್ನೋಯಿ, ಸಲ್ಮಾನ್ ಖಾನ್, ದೀಪಕ್ ಚಹಾರ್, ರಾಹುಲ್ ಚಹಾರ್, ಅನಿಕೇತ್ ಚೌಧರಿ, ಟಿ.ಎಂ ಉಲ್-ಹಕ್, ತಾಜಿಂದರ್ ಸಿಂಗ್, ಅರ್ಜಿತ್ ಗುಪ್ತಾ, ನಾತು ಸಿಂಗ್.

ಸಮಯ: ಬೆಳಗ್ಗೆ 09:30
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

loading...