ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

0
1
loading...

 

ಕನ್ನಡಮ್ಮ ಸುದ್ದಿ-ಮುಂಡಗೋಡ: ಪೆಟ್ರೋಲ್ ಹಾಗೂ ಡಿಸೆಲ್ ಮೇಲಿನ ತೆರಿಗೆ ಹೆಚ್ಚಿಸಿರುವ ರಾಜ್ಯ ಮೈತ್ರಿ ಸರ್ಕಾರ ಹಾಗೂ 25 ಲಕ್ಷ ಹಣ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಸಚಿವರ ವಿರುದ್ದ ತಾಲೂಕಾ ಬಿಜೆಪಿ ಕಾರ್ಯಕರ್ತರು ಭಾನುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ಶಿರಸಿ-ಹುಬ್ಬಳ್ಳಿ ರಸ್ತೆಯ ಶಿವಾಜಿ ಸರ್ಕಲ್ ನಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಜನವಿರೋದಿ ನೀತಿ ಅನುಸರಿಸುತ್ತಿರುವ ಹಾಗೂ ಭ್ರಷ್ಟಾಚಾರದಲ್ಲಿ ಕಾಲಹರಣ ಮಾಡುತ್ತಿರುವ ರಾಜ್ಯ ಮೈತ್ರಿ ಸರ್ಕಾರ ತೊಲಗಬೇಕು ಎಂದು ರಾಜ್ಯ ಮೈತ್ರಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶವನ್ನು ಹೊರ ಹಾಕಿದರು.
ಈ ಹಿಂದೆ ತೈಲ ಬೆಲೆ ಹಚ್ಚಳವಾದಾಗ ಇದೇ ಕಾಂಗ್ರೇಸ ಹಾಗೂ ಜೆಡಿಎಸ್ ನವರು ಪ್ರತಿಭಟನೆ ನಡೆಸಿ ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಿದಾಗಿಯೂ ರಾಜ್ಯದಲ್ಲಿರುವ ಕಾಂಗ್ರೇಸ-ಜೆ.ಡಿ.ಎಸ್ ಮೈತ್ರಿ ಸರ್ಕಾರ ತೈಲ ಬೆಲೆಯ ಮೇಲಿನ ತೆರಿಗೆ ಹೆಚ್ಚಿಸಿ ರಾಜ್ಯದ ಜನತೆಗೆ ಬರೆ ಎಳೆಯುವಂತ ಕೆಲಸ ಮಾಡಿದ್ದು, ದ್ವಂದ್ವ ನೀತಿ ಅನುಸರಿಸಿದ್ದಾರೆ. ತೈಲ ಬೆಲೆಯ ಮೇಲೆ ಹೆಚ್ಚಿಸಿದ ತೆರಿಗೆಯನ್ನು ತಕ್ಷಣ ಇಳಿಸುಂತೆ ಆಗ್ರಹಿಸಿದರು. ಅಲ್ಲದೇ ದಾಖಲೆ ಇಲ್ಲದ 25 ಲಕ್ಷ ಹಣದ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಅವರು ತಕ್ಷಣ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಗುಡ್ಡಪ್ಪ ಕಾತೂರ, ಪ.ಪಂ ಸದಸ್ಯ ಪಣಿರಾಜ ಹದಳಗಿ, ಅಶೋಕ ಚಲವಾದಿ, ಮಂಜುನಾಥ ಹರ್ಮಲಕರ, ಶೇಖರ ಲಮಾಣಿ, ಜಯಸುಧಾ ಭೋವಿ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪರ, ಗುರು ಕಾಮತ, ನಿಂಗಜ್ಜ ಕೋಣನಕೇರಿ, ವಿಠ್ಠಲ ಬಾಳಂಬೀಡ, ಚನ್ನಪ್ಪ ಹಿರೇಮಠ, ವೈ.ಪಿ ಪಾಟೀಲ, ಮಧುಕರ ಗುಂಡ, ನಾಗರಾಜ ಸಂಕನಾಳ, ಪ್ರಮೋದ ಸಣ್ಣಮನಿ, ಸುಭಾಸ ಲಮಾಣಿ, ರಾಜು ಬಾಬರ ಮುಂತಾದವರಿದ್ದರು.

loading...