ರಾಘವೇಂದ್ರ ನಾಯ್ಕರಿಂದ ಸರ್ಕಾರಕ್ಕೆ ವಂಚನೆ: ಆರೋಪ

0
5
loading...

 

ಕನ್ನಡಮ್ಮ ಸುದ್ದಿ-ಮುಂಡಗೋಡ: ಮುಂಡಗೋಡನ ಬೃಂದಾವನ ಲೇಔಟ್ ಹಾಗೂ ಕಾಂಟ್ರಿಕ್ಸ್ ಗ್ರೂಪ್ ಮಾಲೀಕ ರಾಘವೇಂದ್ರ ನಾಯ್ಕ ಪ.ಪಂ ವ್ಯಾಪ್ತಿಯ ಸರ್ವೇ ನಂ. 36ಬ 1ರಲ್ಲಿ 1ಎಕರೆ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಇಲಾಖೆಯ ನಕಲಿ ಮೊಹರ ಹಾಗೂ ಸಹಿ ಹಾಕಿ ಸರ್ಕಾರಕ್ಕೆ ವಂಚನೆ ಮಾಡಿದ್ದಾನೆಂದು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ರಾಘವೇಂದ್ರ ನಾಯ್ಕ ತಮಗೂ ಮೋಸ ಮಾಡಿದ್ದಾರೆಂದು ಸ್ಥಳೀಯ ನಿವಾಸಿ ಶಿವಯೋಗಿ ಕೂಡಲಮಠ ಆರೋಪಿಸಿದ್ದಾರೆ.
ಅವರು ಬಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೃಂದಾವನ ಲೇಔಟ್‍ನ ಮುಖ್ಯ ದ್ವಾರದ ರಸ್ತೆಯ ಜಾಗ ನನ್ನ ಹೆಸರಿನಲ್ಲಿತ್ತು. ಉದ್ಯಮಿ ರಾಘವೇಂದ್ರ ನಾಯ್ಕ ದಬ್ಬಾಳಿಕೆಯಿಂದ ಲೇಔಟ್‍ಗೆ ಓಡಾಡಲು ನನ್ನ ಜಾಗದಲ್ಲಿಯೇ ಮುಖ್ಯ ರಸ್ತೆ ನಿರ್ಮಾಣ ಮಾಡಿದ್ದಾರೆ.

ನಾನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಈ ಜಾಗದ ಬಗ್ಗೆ ದಾಖಲೆ ನೀಡಿದ ನಂತರ ಸಂದಾನಕ್ಕೆ ಮುಂದಾದ ರಾಘವೆಂದ್ರ ನಾಯ್ಕ, ನಿನ್ನ ಹೆಸರಿನಲ್ಲಿರುವ ಜಾಗವನ್ನು ನೀನು ನನಗೆ ಬಿಟ್ಟು ಕೊಟ್ಟರೆ ನಿನಗೆ ನನ್ನ ಲೇಔಟ್‍ನಲ್ಲಿ ಜಾಗ ಕೊಡುವುದಾಗಿ ಹೇಳಿ ಈಗ ಜಾಗ ಕೊಡದೇ ಮೋಸ ಮಾಡಿದ್ದಾನೆ ಎಂದು ಆರೋಪಿಸಿದರು. ನಾನು ಇಲ್ಲಿಯವರೆಗೆ ಮಾನವೀಯತೆ ದೃಷ್ಟಿಯಿಂದ ಮತ್ತು ಲೇಔಟ್‍ನಲ್ಲಿ ಜಾಗ ಖರೀದಿಸಿ ಮನೆ ಕಟ್ಟಿರುವ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಸುಮ್ಮನಿದ್ದೆ. ರಾಘವೇಂದ್ರ ನಾಯ್ಕ ಹೇಳಿದ ಪ್ರಕಾರ ನನಗೆ ಲೇಔಟ್‍ನಲ್ಲಿ ಜಾಗ ಒದಗಿಸಿದರೆ ಸರಿ ಇಲ್ಲವಾದರೆ ನಾನು ನನ್ನ ಹೆಸರಿನಲ್ಲಿರುವ ಜಾಗೆಯನ್ನು ಕಾನೂನು ರೀತಿಯಲ್ಲಿ ನನ್ನ ವಶಕ್ಕೆ ಪಡೆದುಕೊಳ್ಳುತ್ತೇನೆ. ಜಾಗದ ದಾಖಲಾತಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಿದ್ದೇನೆ ಎಂದು ಹೇಳಿದ ಅವರು ಹಣದ ಆಮಿಷ ಹಾಗೂ ರಾಜಕೀಯ ಪ್ರಭಾವದಿಂದ ಮತ್ತು ಅಧಿಕಾರಿಗಳ ಶಾಮಿಲಾತಿಯಿಂದ ಕಾನೂನು ಬಾಹಿರವಾಗಿ ಲೇಔಟ್‍ನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವ ಈ ಕೃತ್ಯಕ್ಕೆ ಆ ಲೇಔಟ್‍ಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು. ಈ ಲೇಔಟ್ ನಿರ್ಮಾಣ ಮಾಡುವಲ್ಲಿ ಸಾಕಷ್ಟು ಕಾನೂನು ಬಾಹಿರ ಕೃತ್ಯಗಳು ನಡೆದಿದ್ದು ಇದರ ಸಂಪೂರ್ಣ ತನಿಖೆಯಾಗಬೇಕು ಮತ್ತು ಇದರಲ್ಲಿ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಕಾನೂನು ಬಾಹಿರ ಲೇಔಟ್‍ನ ಸಂಪೂರ್ಣ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಆ ಜಾಗಕ್ಕೆ ಸರ್ಕಾರಿ ಮೌಲ್ಯವನ್ನು ಜಮೀನು ಮಾಲೀಕನಿಗೆ ನೀಡಿ ಪಟ್ಟಣದ ನಿವೇಶನರಹಿತ ಸಾರ್ವಜನಿಕರಿಗೆ ನಿವೇಶನಗಳನ್ನು ವಿತರಣೆ ಮಾಡುವಂತೆ ಶಿವಯೋಗಿ ಕೂಡಲಮಠ ಆಗ್ರಹಿಸಿದರು.

loading...