ಲೋಕಸಭಾ ಚುನಾವಣೆ; ಉತ್ತರಪ್ರದೇಶದಲ್ಲಿ ಎಲ್ಲ 80 ಕ್ಷೇತ್ರಗಳಿಗೆ ಕಾಂಗ್ರೆಸ್‍ ಸ್ಪರ್ಧೆ

0
1
loading...

ಲಖನೌ:- ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್ ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮಹಾಮೈತ್ರಿ ಮಾಡಿಕೊಂಡ ನಡುವೆಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 80 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್‍ ನಿರ್ಧರಿಸಿದೆ.

ನಿನ್ನೆಯಷ್ಟೇ ಮೈತ್ರಿ ಘೋಷಣೆ ಮಾಡಿದ್ದ ಎಸ್ ಪಿ ಹಾಗೂ ಬಿಎಸ್ಪಿ ಪಕ್ಷಗಳು, ಮೈತ್ರಿಕೂಟದಿಂದ ಕಾಂಗ್ರೆಸ್‍ ಅನ್ನು ಹೊರಗಿಟ್ಟು ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ಪ್ರಕಟಿಸಿದ್ದವು.

ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ ಉತ್ತರಪ್ರದೇಶದ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಗುಲಾಮ್‍ ನಬಿ ಆಜಾದ್ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಯಾವುದೇ ಜಾತ್ಯತೀತ ಪಕ್ಷ ಬಿಜೆಪಿಯನ್ನು ಸೋಲಿಸಿದಲ್ಲಿ ಅವರಿಗೆ ಕೃತಜ್ಞರಾಗಿರುತ್ತೇವೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧದ ಅಭಿಯಾನದ ನೇತೃತ್ವ ವಹಿಸಬೇಕಾದ್ದು ಕಾಂಗ್ರೆಸ್‍ ಪಕ್ಷ ಮಾತ್ರ ಎಂದು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಮಹಾ ಮೈತ್ರಿಯ ಭಾಗವಾಗಲು ಕಾಂಗ್ರೆಸ್ ಈ ಹಿಂದೆ ಮನಸ್ಸು ಮಾಡಿತ್ತು. ಆದರೆ, ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ತಮ್ಮ ಮೈತ್ರಿಯನ್ನು ಘೋಷಿಸಿರುವಾಗ ನಾವು ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಆದರೆ, ಚುನಾವಣೆಯ ನಂತರ ಮೈತ್ರಿ ಪಕ್ಷಗಳೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕದ ಅವರು, ಚುನಾವಣಾ ನಂತರ ಮೈತ್ರಿಯ ಕುರಿತು ಈಗಲೇ ಏನು ಹೇಳಲಾಗದು. ಆದರೆ, ಕೇಂದ್ರದಲ್ಲಿ ಬಿಜೆಪಿಯನ್ನು ಕೆಳಗಿಳಿಸಲು ಎಲ್ಲ ಜಾತ್ಯತೀತ ಪಕ್ಷಗಳು ಒಂದಾಗಲಿವೆ ಸೂಚ್ಯವಾಗಿ ನುಡಿದರು.

ಶೀಘ್ರದಲ್ಲೇ ಪಕ್ಷದ ಅಧ್ಯಕ್ಷ ರಾಹುಲ್‍ ಗಾಂಧಿ ಅವರು ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೆಲ ಸ್ಥಳೀಯ ಪಕ್ಷಗಳು ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿವೆ ಎನ್ನುವ ಮೂಲಕ ರಾಷ್ಟ್ರೀಯ ಲೋಕ ದಳ (ಆರ್ ಎಲ್‍ ಡಿ )ಇನ್ನೂ ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ಎಂಬ ಸೂಚನೆಯನ್ನು ರಾಜ್ಯಸಭೆಯ ವಿಪಕ್ಷ ನಾಯಕರೂ ಆಗಿರುವ ಆಜಾದ್‍ ನೀಡಿದ್ದಾರೆ.

ರಾಜ್ಯದಲ್ಲಿನ ತ್ರಿಕೋನ ಸ್ಪರ್ಧೆಯಿಂದ ಬಿಜೆಪಿ ಲಾಭವಾಗುವ ಸಾಧ್ಯತೆಯನ್ನು ತಳ್ಳಿ ಹಾಕಿದ ಅವರು, ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್‍ ಹೊರ ಹೊಮ್ಮಲಿದೆ. 2009ರ ಮಾದರಿಯಲ್ಲೇ ನಾವು ಮೇಲುಗೈ ಸಾಧಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.ಪ್ರಧಾನಿ ಅಭ್ಯರ್ಥಿಯ ಕುರಿತು ಯಾವುದೇ ಸ್ಪಷ್ಟ ಹೇಳಿಕೆ ನೀಡಲು ನಿರಾಕರಿಸಿದ ಅವರು, ಈ ಕುರಿತು ಚುನಾವಣೆಯ ನಂತರವಷ್ಟೇ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ

loading...