ಸರ್ವರೂ ಸಮಾಜ ಕಲಾರಾಧನೆಯಲ್ಲಿ ತೊಡಗಿ: ವಿಶ್ವೇಶ್ವರ

0
1
loading...

 

ಕನ್ನಡಮ್ಮ ಸುದ್ದಿ-ಶಿರಸಿ: ಪ್ರತಿಯೊಂದು ಹಣದ ಅಧೀನ ಆಗುತ್ತಿರುವ ಸನ್ನಿವೇಶದಲ್ಲಿ ಅಭಿವೃದ್ಧಿಯು ಕೇವಲ ಭೌತಿಕ ಪ್ರಗತಿಗೆ ಸೀಮಿತವಾಗಿದೆ. ಇದು ಆಂತರಂಗಿಕವಾಗಿ ಸಾಗಲು ಸಮಾಜ ಕಲಾರಾಧನೆಯಲ್ಲಿ ತೊಡಗಬೇಕು ಎಂದು ವಿದ್ವಾಂಸ ವಿಶ್ವೇಶ್ವರ ಹೆಗಡೆ ಅತ್ತೀಮುರುಡು ಹೇಳಿದರು.
ನೂಪುರ ನೃತ್ಯಶಾಲೆಯ ದಶಮಾನೋತ್ಸವದ ಅಂಗವಾಗಿ ನಗರದ ಕಡವೆ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ನೂಪುರ ನಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದು ಧನ ಸಂಪತ್ತಿನ ವ್ಯಾಮೋಹದಿಂದ ಎಲ್ಲ ಮಾನವೀಯ ಮೌಲ್ಯಗಳೂ ಕಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ವೇದ ಮೂಲ ಹಾಗೂ ದೇವತಾ ಮೂಲವಾದ ಮಾನವೀಯ ಮೌಲ್ಯಗಳನ್ನು ಹೊರಸೂಸುವ ನಾಟ್ಯಶಾಸ್ತ್ರದೆಡೆ ಪ್ರತಿಯೊಬ್ಬರೂ ಸಕ್ತಿ ತಳೆಯಬೇಕು. ಕೇವಲ ಭೌತಿಕವಾಗಿ ಪ್ರಗತಿ ಸಾಧಿಸದೇ ಆಂತರಿಕವಾಗಿಯೂ ಏಳ್ಗೆ ಸಾಧಿಸಲು ನಾಟ್ಯಶಾಸ್ತ್ರ ಹಾಗೂ ಕಲಾರಾಧನೆ ಪೂರಕವಾಗಿದೆ ಎಂದರು.

ಭರತನಾಟ್ಯವು ಪ್ರದರ್ಶನ ಮಾತ್ರವಲ್ಲ ದರ್ಶನವಿದೆ ಎಂಬುದನ್ನು ಕಲಾವಿದರ ಜೊತೆಗೆ ನೋಡುಗರೂ ಅರ್ಥ ಮಾಡಿಕೊಳ್ಳಬೇಕು. ಲೋಕ, ಧರ್ಮ, ಆಧ್ಯಾತ್ಮವು ನಾಟ್ಯಶಾಸ್ತ್ರದ ಬುನಾದಿಯಾಗಿದೆ. ನಾಲ್ಕು ವೇದಗಳಿಂದಲೂ ತತ್ವಗಳನ್ನು ತೆಗೆದುಕೊಂಡ ನಾಟ್ಯವೇದ ಸೃಷ್ಟಿಯಾಗಿದೆ. ಇಂಥ ಉದಾತ್ತ ಚಿಂತನೆಯ ನಾಟ್ಯಶಾಸ್ತ್ರವು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಳಿಸದೆ ತಪಸ್ಸಾಗಿ ಮುಂದುವರಿಸಬೇಕು ಎಂದರು.
ಬನವಾಸಿ ಮಧುಕೇಶ್ವರ ದೇವಾಲಯದ ಧರ್ಮದರ್ಶಿ ಶಿವಾನಂದ ದೀಕ್ಷಿತ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ಶ್ರೀಮಂತಿಕೆ ಹಣ, ಅಂತಸ್ತುಗಳಾದ ಲೌಕಿಕ ಸಂಪತ್ತಿನ ಮೇಲೆ ನಿಂತಿಲ್ಲ. ಸಮಾಜ ಜೀವಂತ ಹಾಗೂ ಶ್ರೀಮಂತವಾಗಿರಲು ಕಲೆಗಳು ಬೆಳೆಯಬೇಕು ಎಂದರು. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದ ಅವರು, ಇಂದು ಕಲೆಗಳೆಡೆ ನಿರಾಸಕ್ತಿಯಿಂದ ಸಮಾಜದಲ್ಲಿ ದ್ವೇಷ, ಅಸೂಯೆಯಂಥ ರೋಗ ಬೆಳೆಯುತ್ತಿದೆ. ಇಂಥ ಸಮಾಜದ ಆರೋಗ್ಯ ಸುಧಾರಿಸಲು ಕಲೆಗಳು ಜೀವಂತಿಕೆಯಿಂದ ಇರಬೇಕು. ಮಾನವೀಯ ಮೌಲ್ಯ ಬಿತ್ತರಿಸುವ ಕಲೆಗಳು ಇನ್ನಷ್ಟು ಬೆಳೆಯಬೇಕು. ತೆರೆಯ ಮುಂದಿನ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದಂತೆ ತೆರೆಯ ಹಿಂದಿನ ಶ್ರಮಕ್ಕೂ ಪ್ರೋತ್ಸಾಹ ನೀಡಬೇಕು. ಕಲಾವಿದರ ಕುರಿತು ಸಮಗ್ರ ಮಾಹಿತಿಯುಳ್ಳ ಕೈಪಿಡಿಯನ್ನು ಆಸಕ್ತರು ಸಿದ್ಧಪಡಿಸಬೇಕು ಎಂದು ಹೇಳಿದರು.

ಸಿದ್ದಾಪುರದ ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿ ಆರ್.ಜಿ.ಪೈ ಮಂಜೈನ್ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಕಮಲಾ ನೆಹರು ಮಹಿಳಾ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಂಜುನಾಥ ಭಟ್ಟ ಹಾಗೂ ತೋಟಗಾರಿಕಾ ತಜ್ಞ ಗೋಪಾಲಕೃಷ್ಣ ಹೆಗಡೆ ಇದ್ದರು.
ಪ್ರಣೀತಾ ಹೆಗಡೆ ಪ್ರಾರ್ಥಿಸಿದರು. ವಿಜಯಶ್ರೀ ಹೆಗಡೆ ಸ್ವಾಗತಿಸಿದರು. ಶ್ರೀಲತಾ ಶಾನಭಾಗ ವರದಿ ವಾಚಿಸಿದರು. ಗಜಾನನ ಭಟ್ಟ ಅಭಿನಂದನಾ ಮಾತನಾಡಿದರು. ಸುಬ್ರಾಯ ಆಚಾರ್ಯ ನಿರೂಪಿಸಿದರು. ವಿದುಷಿ ಅನುರಾಧಾ ಹೆಗಡೆ ವಂದಿಸಿದರು. ನಂತರ ದಶಮಾನೋತ್ಸವ ಅಂಗವಾಗಿ ರಂಗೋಲಿ, ಭಕ್ತಿಗೀತೆ ಹಾಗೂ ಏಕ್ ಮಿನಿಟ್ ಸ್ಪರ್ಧೆ ನಡೆದವು. ನೃತ್ಯ ನಮನ, ನೃತ್ಯ ಶಿಕ್ಷಕಿ ಅನುರಾಧಾ ಹೆಗಡೆ ನಿರ್ದೇಶನದಲ್ಲಿ ರಾಮರಥ ನೃತ್ಯ ರೂಪಕ ಪ್ರದರ್ಶನಗೊಂಡಿತು.

loading...