ಹಳಿಯಾಳ ತಾಲೂಕು ಹಿಂಗಾರು ಬರಪೀಡಿತ ಪ್ರದೇಶ

0
2
loading...

 

ಕನ್ನಡಮ್ಮ ಸುದ್ದಿ-ಹಳಿಯಾಳ: ತಾಲೂಕನ್ನು ಸಹ ಹಿಂಗಾರು ಹಂಗಾಮಿನ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿರುವುದರಿಂದ ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮಾಡಬೇಕಾಗಿರುವ ಕಾರ್ಯಗಳ ಬಗ್ಗೆ ಸಭೆಯು ಶುಕ್ರವಾರ ಸಂಜೆ ತಾಲೂಕು ಕಚೇರಿ ಸಭಾಂಗಣದಲ್ಲಿ ನೆರವೇರಿತು.
ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ ಅವರ ಮುಖ್ಯ ಉಪಸ್ಥಿತಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.

ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಒಮ್ಮೆಯೂ ಮಳೆ ಬಾರದ ಹಿನ್ನೆಲೆಯಲ್ಲಿ ಹಾಗೂ ವಾಡಿಕೆ ಮಳೆಗಿಂತ ಶೇ. 40 ರಷ್ಟು ಕೊರತೆ ಇರುವ ಕಾರಣ ಸತತ ಅಧಿಕ ಶುಷ್ಕ ವಾತಾವರಣದ ಪರಿಣಾಮ ತೇವಾಂಶದ ಕೊರತೆ ಕಾಣುತ್ತಿದೆ. ಹಿಂಗಾರಿನಲ್ಲಿನ ದ್ವಿದಳ ಧಾನ್ಯ ಬೆಳೆ ಬಿತ್ತನೆಯ ಕೊರತೆ, ಅಂತರ್ಜಲ ಇಳಿಮುಖ ಮೊದಲಾದ ಮಾನದಂಡಗಳ ಆಧಾರದ ಮೇಲೆ ಹಳಿಯಾಳ ತಾಲೂಕನ್ನು ಹಿಂಗಾರು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ ವಿದ್ಯಾಧರ ಗುಳಗುಳಿ ಮಾತನಾಡುತ್ತಾ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಕಾರ್ಯ ಮಾಡಬೇಕಾಗಿದೆ. ಕೆರೆಗಳ ಹೂಳನ್ನು ತೆರವುಗೊಳಿಸುವುದು, ನೀರನ್ನು ಸಂಗ್ರಹಿಸಿಡುವ ಕಾಮಗಾರಿಗಳು ಮಾಡುವುದು ಸೂಕ್ತ. ಪಶುಗಳಿಗೆ ಮೇವಿನ ವ್ಯವಸ್ಥೆ, ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು, ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಮೊದಲಾದ ಕಾರ್ಯಗಳನ್ನು ಸಂಬಂಧಿಸಿದವರು ಮಾಡಲು ಸಿದ್ಧತೆ ನಡೆಸುವಂತೆ ಸೂಚಿಸಿದರು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ ಮಾತನಾಡುತ್ತಾ ಮುಂಗಾರಿನಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣ ಕೆರೆಗಳು ಭರ್ತಿಯಾಗಿದ್ದು ಈ ಕಾರಣ ಅವುಗಳ ಹೂಳನ್ನು ಈ ಸಂದರ್ಭದಲ್ಲಿ ತೆರವುಗೊಳಿಸಲಾಗುವುದಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಉಳಿದ ಕಾಮಗಾರಿಗಳನ್ನು ಆಯಾ ಗ್ರಾಮ ಪಂಚಾಯತಿಯವರ ವತಿಯಿಂದ ಮಾಡಿಸಲಾಗುವುದು. ತಾಲೂಕಿನಲ್ಲಿ 93 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅವುಗಳ ಪೈಕಿ ಅಂದಾಜು 83ರಷ್ಟು ಘಟಕಗಳು ಉಪಯೋಗಿಸಬಹುದಾಗಿದೆ. ಉಳಿದವುಗಳನ್ನು ಒಂದು ವಾರದಲ್ಲಿ ಸರಿಪಡಿಸುವಂತಾಗಬೇಕು ಹಾಗೂ ಆ ಶುದ್ಧ ನೀರನ್ನು ಬಳಸುವಂತೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ನೀರು ಸರಬರಾಜು ಉಪವಿಭಾಗದ ಅಧಿಕಾರಿ ಹಳೇಮನಿ ಇವರು ನೀರಿನ ವ್ಯವಸ್ಥೆ ಬಗ್ಗೆ ಹಾಗೂ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ನದಾಫ ಇವರು ಪಶುಗಳಿಗೆ ಮೇವಿನ ವ್ಯವಸ್ಥೆ ಕುರಿತು ತಮ್ಮ ಸಿದ್ಧತೆಗಳನ್ನು ತಿಳಿಸಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಎ.ಆರ್. ಹೇರಿಯಲ್, ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಇಲಾಖೆಯ ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...