ಅಕ್ರಮ ಹಣ ವರ್ಗಾವಣೆ ಪ್ರಕರಣ: 3ನೇ ಬಾರಿಗೆ ಇಡಿ ವಿಚಾರಣೆಗೆ ವಾದ್ರಾ ಹಾಜರ್

0
1
loading...

ನವದೆಹಲಿ: ವಿದೇಶದಲ್ಲಿ ಆಸ್ತಿ ಖರೀದಿಗಾಗಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಉದ್ಯಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರು. ಫೆ. 6 ಮತ್ತು 7ರಂದೂ ಸಹ ವಾದ್ರಾ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದರು.
ಲಂಡನ್ ನ ಬ್ರಿಯಾನ್ ಸ್ಟನ್ ಸ್ಕ್ವೇರ್ ನಲ್ಲಿ 1.9 ದಶಲಕ್ಷ ಬ್ರಿಟಿಷ್ ಪೌಂಡ್ ಮೌಲ್ಯದ ಆಸ್ತಿ ಖರೀದಿಗಾಗಿ ಅಕ್ರಮ ಹಣ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಜಾಮ್ ನಗರ್ ಹೌಸ್ ನಲ್ಲಿ ಬೆಳಗ್ಗೆ 10.30ಕ್ಕೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.
ಫೆ.7ರಂದು ನಡೆದ 2ನೇ ವಿಚಾರಣೆಯಲ್ಲಿ ತನಿಖಾ ತಂಡವು ಆಸ್ತಿಪಾಸ್ತಿ ಖರೀದಿಯ ದಾಖಲೆ ಮತ್ತು ಇ-ಮೇಲ್ ಪ್ರತಿಗಳನ್ನು ರಾಬರ್ಟ್ ವಾದ್ರಾ ಮುಂದಿರಿಸಿ ವಿಚಾರಣೆ ನಡೆಸಿದ್ದು, ವಾದ್ರಾ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಇಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಲಂಡನ್ ಮೂಲದ ಆಸ್ತಿಗೂ ತಮಗೂ ಸಂಬಂಧವಿಲ್ಲವೆಂದು ವಾದ್ರಾ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಕಾನೆರ್ ಭೂ ಹಗರಣದ ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಫೆ. 12ರಂದು ಜೈಪುರದಲ್ಲಿ ಜಾರಿ ನಿರ್ದೇಶನಾಲಯದ ಎದುರು ವಾದ್ರಾ ಹಾಜರಾಗುವ ನಿರೀಕ್ಷೆಯಿದೆ. ಈ ಪ್ರಕರಣದಲ್ಲಿ ವಾದ್ರಾ ಅವರಿಗೆ ಫೆ. 16ರ ವರೆಗೂ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ದೆಹಲಿ ನ್ಯಾಯಾಲಯ, ತನಿಖಾಧಿಕಾರಿಗಳ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದೆ.

loading...