ಆದಿತ್ಯ ಸರ್ವಟೆ ಸ್ಪೀನ್‌ಗೆ ಮಲಗಿದ ಸೌರಾಷ್ಟ್ರ : ಸತತ ಎರಡನೇ ಬಾರಿ ವಿದರ್ಭ ಮುಡಿಗೆ ರಣಜಿ ಟ್ರೋಫಿ

0
4
loading...

ನಾಗ್ಪುರ:- ತೀವ್ರ ಕುತೂಹಲ ಕೆರಳಿಸಿದ 2018-19ರ ಆವೃತ್ತಿಯ ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ವಿದರ್ಭ ತಂಡ, ಸೌರಾಷ್ಟ್ರದ ವಿರುದ್ಧ 78 ರನ್‌ಗಳಿಂದ ಜಯ ಸಾಧಿಸಿ ಸತತ ಎರಡನೇ ಬಾರಿ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿತು. ಚೊಚ್ಚಲ ಚಾಂಪಿಯನ್‌ ಆಗುವ ಕನಸ್ಸು ಕಂಡಿದ್ದ ಸೌರಾಷ್ಟ್ರ ತಂಡಕ್ಕೆ ಸೋಲಿನಿಂದ ಭಾರಿ ನಿರಾಸೆ ಉಂಟಾಯಿತು.
ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ 5 ವಿಕೆಟ್‌ ಕಳೆದುಕೊಂಡು 58 ರನ್‌ಗಳಿಂದ ಐದನೇ ದಿನವಾದ ಇಂದು ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ ತಂಡದ ಗೆಲುವಿಗೆ 148 ರನ್‌ ಅಗತ್ಯವಿತ್ತು. ಆದರೆ, ಸರ್ವಟೆ ಸ್ಪಿನ್‌ ಎದುರಿಸಲಾಗದೆ ಸೌರಾಷ್ಟ್ರ 58.4 ಓವರ್‌ಗಳಿಗೆ 127 ರನ್‌ಗಳಿಗೆ ಸರ್ವ ಪತನವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
ತೀವ್ರ ಒತ್ತಡದಲ್ಲಿ ಕ್ರೀಸ್‌ಗೆ ಆಗಮಿಸಿದ ವಿಶ್ವರಾಜ್ ಜಡೇಜಾ ಹಾಗೂ ಕಮಲೇಶ್‌ ಮಕ್ವಾನ ಜೋಡಿ ಹೆಚ್ಚು ಹೊತ್ತು ಉಳಿಯಲಿಲ್ಲ. ಕಮಲೇಶ್‌ ಮಕ್ವಾನ ಅವರನ್ನು ಆದಿತ್ಯ ಸರ್ವಟೆ ಕ್ಲೀನ್‌ ಬೌಲ್ಡ್ ಮಾಡಿದರು. ನಂತರ ಕ್ರೀಸ್‌ಗೆ ಬಂದ ಪ್ರೇರಕ್‌ ಮಂಕಡ್‌ (2 ರನ್) ಅವರನ್ನು ಅಕ್ಷಯ್‌ ವಾಖರೆ ಔಟ್‌ ಮಾಡಿದರು.

ಆರಂಭದಿಂದಲೂ ಒಂದು ತುದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಎದೆಗುಂದದೆ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ವಿಶ್ವರಾಜ್‌ ಜಡೇಜಾ ವಿದರ್ಭ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಇವರು ಆಡಿದ 137 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 52 ರನ್ ದಾಖಲಿಸಿದರು. ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನದಲ್ಲಿದ್ದ ಇವರಿಗೆ ಮತ್ತೊಂದು ತುದಿಯಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್‌ ಸಾಥ್‌ ನೀಡಲಿಲ್ಲ.ಅರ್ಧ ಶತಕದ ಬಳಿಕ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ವಿಶ್ವರಾಜ್‌, ಸರ್ವಟೆ ಎಸೆತವನ್ನು ಅರಿಯುವಲ್ಲಿ ವಿಫಲವಾಗಿ ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡರು.

ಇವರ ವಿಕೆಟ್‌ ಉರುಳುತ್ತಿದ್ದಂತೆ ವಿದರ್ಭಕ್ಕೆ ರಣಜಿ ಟ್ರೋಫಿ ಪ್ರಶಸ್ತಿ ಸ್ಪಷ್ಟವಾಗಿ ಗೋಚರಿಸಿತು. ಇವರನ್ನು ಬಿಟ್ಟರೆ ಅಂತಿಮ ಹಂತದಲ್ಲಿ ಧರ್ಮೇಂದ್ರ ಸಿನ್ಹ್‌ ಜಡೇಜಾ 17 ರನ್‌ ಗಳಿಸಿ ವಾಖರೆಗೆ ವಿಕೆಟ್‌ ಒಪ್ಪಿಸಿದರು. ನಾಯಕ ಜಯದೇವ್‌ ಉನದ್ಕತ್ 7 ರನ್ ಗಳಿಸಿ ಸರ್ವಟೆಗೆ ಶರಣಾದರು. ಚೇತನ್‌ ಸಕಾರಿಯ 2 ರನ್‌ ಗಳಿಸಿ ಅಜೇಯರಾಗಿ ಉಳಿದರು.

ವಿಶ್ವರಾಜ್‌ ಅವರನ್ನು ಬಿಟ್ಟರೆ ಚೇತೇಶ್ವರ ಪೂಜಾರ ಸೇರಿದಂತೆ ಇನ್ನುಳಿದ ಎಲ್ಲ ಬ್ಯಾಟ್ಸ್‌ಮನ್‌ಗಳು ವಿದರ್ಭ ಬೌಲರ್‌ಗಳ ದಾಳಿ ಎದುರಿಸಲಾಗದೆ ಬಾಲಂಗೋಚಿಗಳಂತೆ ಪೆವಿಲಿಯನ್‌ಗೆ ಪೆರೇಡ್‌ ನಡೆಸಿದರು.
ವಿದರ್ಭ ಪರ ಪಂದ್ಯದಲ್ಲಿ ಅದ್ವಿತೀಯ ಪ್ರದರ್ಶನ ತೋರಿದ ಆದಿತ್ಯ ಸರ್ವಟೆ ಪ್ರಥಮ ಇನಿಂಗ್ಸ್‌ 5 ವಿಕೆಟ್‌ ಹಾಗೂ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ನಲ್ಲಿ 49 ರನ್ ಹಾಗೂ ಬೌಲಿಂಗ್‌ನಲ್ಲಿ 24 ಓವರ್‌ಗಳಲ್ಲಿ 59 ರನ್‌ ನೀಡಿ 6 ವಿಕೆಟ್‌ ಪಡೆದರು. ಒಟ್ಟು 11 ವಿಕೆಟ್‌ ಪಡೆದ ಸರ್ವಟೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌
ವಿದರ್ಭ
ಪ್ರಥಮ ಇನಿಂಗ್ಸ್‌: 312
ದ್ವಿತೀಯ ಇನಿಂಗ್ಸ್‌: 200

ಸೌರಾಷ್ಟ್ರ
ಪ್ರಥಮ ಇನಿಂಗ್ಸ್‌: 307
ದ್ವಿತೀಯ ಇನಿಂಗ್ಸ್‌: 127 (58.4)
ವಿಶ್ವರಾಜ್‌ ಜಡೇಜಾ-52
ಧರ್ಮೇಂದ್ರ ಸಿನ್ಹ್ ಜಡೇಜಾ-17
ಬೌಲಿಂಗ್‌: ಆದಿತ್ಯ ಸರ್ವಟೆ 59 ಕ್ಕೆ 6, ಅಕ್ಷಯ್‌ ವಾಖರೆ 37 ಕ್ಕೆ 3

loading...