ಕುಮಾರಸ್ವಾಮಿ ಆಡಿಯೋ ತನಿಖೆಗೆ ಆಪ್ ಒತ್ತಾಯ

0
4
loading...

ಬೆಂಗಳೂರು:- ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಬಿಡುಗಡೆಗೊಳಿಸಿದ ಧ್ವನಿ ಸುರಳಿಯ ಕುಲಂಕೂಷ ತನಿಖೆಯನ್ನು ಸುಪ್ರೀಂ ಕೋರ್ಟ್ ಕಣ್ಗಾವಲಿನಡಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಶುಕ್ರವಾರ ಬಜೆಟ್‌ ಪೂರ್ವ ತುರ್ತು ಪತ್ರಿಕಾಗೋಷ್ಠಿಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು ಭ್ರಷ್ಟಾಚಾರ ಹಾಗೂ ಅನೈತಿಕ ರಾಜಕೀಯದ ಆರೋಪವನ್ನು ಪ್ರತಿಪಕ್ಷ ನಾಯಕರಾದ ಬಿ.ಎಸ್ ಯಡಿಯೂರಪ್ಪನವರ ಮೇಲೆ ಮಾಡಿದ್ದರು.
ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಇತರೆ ನಾಯಕರು ಮೈತ್ರಿ ಸರಕಾರವನ್ನು ಉರುಳಿಸಲು ಅನೈತಿಕ ರಾಜಕಾರಣದ ಮೊರೆ ಹೋಗಿದ್ದಾರೆ. ಆಪರೇಷನ್ ಕಮಲದ ಮೂಲಕ ಆಡಳಿತ ಪಕ್ಷದ ಶಾಸಕರನ್ನು ಹಣ ಹಾಗೂ ಅಧಿಕಾರದ ಅಮಿಷವೊಡ್ಡಿ ಖರೀದಿಸಲು ಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಆಪಾದಿಸಿದ್ದಾರೆ.
ಮುಖ್ಯಮಂತ್ರಿಯೊಬ್ಬರು ಪ್ರತಿಪಕ್ಷದ ನಾಯಕರ ಮೇಲೆ ಈ ರೀತಿಯ ಗಂಭೀರ ಆರೋಪ ಹೊರೆಸಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲು. ಈ ಸಂಬಂಧ ಕುಮಾರಸ್ವಾಮಿ ಈಗಾಗಲೇ ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಭ್ರಷ್ಟಾಚಾರದ ಆರೋಪದಡಿ ಜೈಲು ಸೇರಿದ್ದರು. ಅಲ್ಲದೇ ”ಈ ಸರ್ಕಾರ ಕಿತ್ತೊಗೆಯುವುದೇ ತನ್ನ ಗುರಿ ” ಎಂಬ ಹೇಳಿಕೆಯನ್ನೂ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನೋಡಿದಾಗ ಯಡಿಯೂರಪ್ಪ ಹಾಗೂ ಅವರ ಪಕ್ಷದ ನಾಯಕರ ವಿರುದ್ಧ ಮುಖ್ಯಮಂತ್ರಿಗಳ ಆರೋಪದಲ್ಲಿ ಹುರುಳಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಾಗಿ, ಧ್ವನಿ ಸುರಳಿ ಸಂಬಂಧ ದೂರನ್ನು ಸ್ಪೀಕರ್‌ರವರು ತಕ್ಷಣವೇ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದೆ.
ದೂರಿನಲ್ಲಿ ಉಲ್ಲೇಖವಾಗಿರುವ ಅಂಶಗಳು ಹಾಗೂ ವ್ಯಕ್ತಿಗಳು ನಿಜವೆಂದು ಕಂಡುಬಂದರೆ ತಪ್ಪಿತಸ್ಥರ ಶಾಸಕ ಸ್ಥಾನವನ್ನು ಅನರ್ಹಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು. ಜತೆಗೆ, ಪ್ರಿವೆಂಶನ್ ಆಫ್ ಮನಿ ಲ್ಯಾಂಡ್ರಿಂಗ್ ಕಾಯ್ದೆಯಡಿ (PMLA) ತನಿಖೆಯಾಗಬೇಕು ಎಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ

loading...