ದೆಹಲಿ ಹೋಟೆಲ್‌ನಲ್ಲಿ ಬೆಂಕಿ ಅವಘಡ: 17 ಮಂದಿ ಸಾವು, ಮೂವರು ಗಂಭೀರ

0
2
loading...

ನವದೆಹಲಿ:- ಕೇಂದ್ರ ದೆಹಲಿಯ ಕರೋಲ್‌ಬಾಗ್‌ ಪ್ರದೇಶದ ಹೋಟೆಲ್‌ವೊಂದರಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 17 ಮಂದಿ ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ದೆಹಲಿಯ ಕರೋಲ್‌ಬಾಗ್‌ನ ಅರ್ಪಿತ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ಬೆಳಗ್ಗಿನ ಜಾವ 4.35ಕ್ಕೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದಿಂದ ಸುಮಾರು 25ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿನ ಅರ್ಪಿತ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬೆಳಗ್ಗಿನ ಜಾವ 4.35ರ ಸುಮಾರಿಗೆ ಕರೆ ಬಂತು. ತಕ್ಷಣ 20 ಅಗ್ನಿಶಾಮಕ ವಾಹನ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 8.30ರ ವೇಳೆಗೆ ಬೆಂಕಿಯನ್ನು ತಹಬದಿಗೆ ತರಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾವನ್ನಪ್ಪಿದವರಲ್ಲಿ ಓರ್ವ ಮಹಿಳೆ ಮತ್ತು ಒಂದು ಮಗು ಕೂಡ ಇದೆ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ಯುಎನ್ಐಗೆ ತಿಳಿಸಿದ್ದಾರೆ.
ಇದು ಮೂರು ಮಹಡಿಯ ಕಟ್ಟಡವಾಗಿದ್ದು, ಈಗ ಸಂಪೂರ್ಣ ಬೆಂಕಿ ನಂದಿಸಲಾಗಿದ್ದು, ಅಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವರು ಜೀವರಕ್ಷಣೆಗಾಗಿ ಕಿಟಕಿಯಿಂದ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಟ್ಟ ಹೊಗೆಯಿಂದ ಉಸಿರುಕಟ್ಟಿ ಹೆಚ್ಚಿನ ಸಾವು ಸಂಭವಿಸಿದೆ. ಆದರೂ ಸಾವನ್ನಪ್ಪಿದವರ ಸಂಖ್ಯೆ ಹಾಗೂ ಬೆಂಕಿ ಉಂಟಾಗಲು ನಿಖರವಾದ ಕಾರಣ ತಿಳಿದುಬಂದಿಲ್ಲ.

loading...