ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಯಡಿಯೂರಪ್ಪ ಚಾಲನೆ

0
1
loading...

ಬೆಂಗಳೂರು:- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಮೇರಾ ಪರಿವಾರ್ ಬಿಜೆಪಿ ಪರಿವಾರ್’ ಅಭಿಯಾನ ಇಂದಿನಿಂದ ಆರಂಭಗೊಂಡಿದೆ.
ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ಬಿಜೆಪಿ ಲಾಂಛನದ ಸ್ಟಿಕ್ಕರ್ ಅಂಟಿಸುವ ಮೂಲಕ ಮತದಾರರನ್ನು ಪಕ್ಷದತ್ತ ಆಕರ್ಷಿಸುವ ಅಭಿಯಾನ ಇದಾಗಿದೆ.
ರಾಜ್ಯದಲ್ಲಿಯೂ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಕನಿಷ್ಠ 70 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸಿ, ಸ್ಟಿಕ್ಕರ್ ಅಂಟಿಸುವ ಗುರಿ ಹೊಂದಲಾಗಿದೆ.
ನಗರದಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಸ್ಟಿಕ್ಕರ್ ಅಂಟಿಸುವ ಮೂಲಕ ‘ನಮ್ಮ ಮನೆ ಬಿಜೆಪಿ ಮನೆ’ಗೆ ಅಧಿಕೃತವಾಗಿ ಚಾಲನೆ ನೀಡಿದರು. ಇದೇ ವೇಳೆ ಬಿಜೆಪಿ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮೇಲ್ಮನೆ ಉಪನಾಯಕ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ರೇಣುಕಾಚಾರ್ಯ, ಸಿ.ಟಿ.ರವಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲಿದ್ದೇವೆ. ಇಂದು ಎಲ್ಲಾ ಮುಖಂಡರ ಮನೆಗಳಲ್ಲಿ ಪಕ್ಷದ ಧ್ವಜ ಹಾರಿಸಲಾಗುತ್ತಿದೆ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, “ನಮ್ಮ ಮನೆ ಬಿಜೆಪಿ ಮನೆ” ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದೇಶಕ್ಕಾಗಿ ಮೋದಿ ಬೇಕು. ಭ್ರಷ್ಟಾಚಾರಮುಕ್ತ, ಸ್ವಚ್ಛ ದೇಶಕ್ಕಾಗಿ ಮೋದಿ ಅವರ ಕೈಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಆಪರೇಷನ್ ಕಮಲ ಧ್ವನಿಸುರುಳಿ ಪ್ರಕರಣದ ಎಸ್.ಐ.ಟಿ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಅಡ್ಡದಾರಿ ಹಿಡಿದಿಲ್ಲ. ಹೀಗಾಗಿ ನಮಗೆ ಯಾವುದೇ ತನಿಖೆಯ ಭಯವಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಶಾಸಕರಿಂದ ಅಡ್ಡಮತದಾನ ಮಾಡಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದಾಗ ನೈತಿಕತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಅಡ್ಡಮತದಾನ ಮಾಡಿಸುವಾಗ ನೈತಿಕತೆ ಬಗ್ಗೆ ತಿಳಿದಿರಲಿಲ್ಲವೇ.? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಆಡಿಯೋ ರೆಕಾರ್ಡಿಂಗ್ ಮಾಡಿಸಿದ್ದು ಎಂದು ಹೇಳಿದ್ದಾರೆ. ಹೀಗಾಗಿ ತನಿಖೆ ಪ್ರಾಮಾಣಿಕವಾಗಿರುವುದಿಲ್ಲ. ಪ್ರಾಮಾಣಿಕವಾಗಿ ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಾಮಾಣಿಕ ತನಿಖೆಗೆ ತಾವೆಲ್ಲ ಒಪ್ಪುವುದಾಗಿ ತಿಳಿಸಿದ ಅವರು, ಬಿಜೆಪಿಗೆ ಯಾವುದೇ ವಿಚಾರದಲ್ಲಿಯೂ ಹಿಂಜರಿಕೆ ಇಲ್ಲ. ಜನಾದೇಶ ಏನು ಎನ್ನುವುದು ಲೋಕಸಭಾ ಚುನಾವಣೆ ಫಲಿತಾಂಶವೇ ತಿಳಿಸಲಿದೆ ಎಂದರು.

loading...