ನಾಳೆ ಹುಬ್ಬಳ್ಳಿಗೆ ಮೋದಿ : ‘ಲೋಕ ಸಮರ’ಕ್ಕೆ ರಣಕಹಳೆ

0
2
loading...

ಹುಬ್ಬಳ್ಳಿ:- ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮುಂಬೈ-ಕರ್ನಾಟಕದ ಹೆಬ್ಬಾಗಿಲೆನಿಸಿರುವ ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿದ್ದಾರೆ.
ಹುಬ್ಬಳಿಯಲ್ಲಿ ನಾಳೆ ನಡೆಯುವ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದು, ಉತ್ತರ ಕರ್ನಾಟಕ ಭಾಗದ ಬಹುತೇಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಮೋದಿಯವರ ವಿರುದ್ಧ ಹಲವು ವೇದಿಕೆಗಳಲ್ಲಿ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿಯವರು ಟೀಕಾಸ್ತ್ರ ಪ್ರಯೋಗಿಸುವ ಸಾಧ್ಯತೆಯಿದೆ.
ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳುವುದೇ ಅಲ್ಲದೆ, ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿಯವರು ಚಾಲನೆ ನೀಡಲಿದ್ದಾರೆ..
ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ -ಐಐಐಟಿ ಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಹಾಗೂ ಕೇಂದ್ರ ಸರ್ಕಾರದ ಅನುದಾನದಡಿ ನಿರ್ಮಾಣಗೊಂಡಿರುವ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಧಾರವಾಡ ನಗರದ ಅಡುಗೆ ಅನಿಲ ಪೂರೈಕೆ ಯೋಜನೆ, ಮಂಗಳೂರು ಪೆಟ್ರೋಲಿಯಂ ರಿಸರ್ವ್ ಸೌಲಭ್ಯ, ಪಡೂರು ಪೆಟ್ರೋಲಿಯಂ ರಿಸರ್ವ್ ಸೌಲಭ್ಯ, ದ್ವಿಗುಣಗೊಂಡಿರುವ ಚಿಕ್ಕಜಾಜೂರು-ಮಾಯಕೊಂಡ ರೈಲು ಮಾರ್ಗ ಲೋಕಾರ್ಪಣೆಗೊಳಿಸಲಿದ್ದಾರೆ.
ಆಹ್ವಾನವಿಲ್ಲ: ಮುಖ್ಯಮಂತ್ರಿ ಅಸಮಾಧಾನ ಕೇಂದ್ರ ಸರ್ಕಾರದ ಐಐಟಿಗಳಿಗೆ ಜಾಗ ಹಾಗೂ ರೈಲ್ವೆ ಮತ್ತು ಪೆಟ್ರೋಲಿಯಂ ಯೋಜನೆಗಳಿಗೆ ರಾಜ್ಯ ಸರ್ಕಾರ ಆರ್ಥಿಕ ಸಹಕಾರ ನೀಡಿದೆ. ಆದಾಗ್ಯೂ, ಉದ್ಘಾಟನಾ ಕಾರ್ಯಕ್ರಮಗಳಿಗೆ ಆಹ್ವಾನ ಬಂದಿಲ್ಲ. ಹೀಗಾಗಿ ನಾಳೆ ಹುಬ್ಬಳ್ಳಿಗೆ ತೆರಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದ ಎಚ್ ಡಿಕೆ, ರಾಜ್ಯ ಸರ್ಕಾರದ ಮುಖ್ಯಸ್ಥರನ್ನು ಉದ್ಘಾಟನಾ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮೂಲಕ ನಾಡಿನ ಜನತೆಗೆ ಕೃತಜ್ಞತೆ ಅರ್ಪಿಸುವ ಕನಿಷ್ಠ ಸೌಜನ್ಯವೂ ಪ್ರಧಾನಿ ನರೇಂದ್ರ ಮೋದಿಯವರಿಗಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯ ಬಗ್ಗೆ ಗುರುವಾರ ಲೋಕಸಭೆಯಲ್ಲಿನ ಭಾಷಣದಲ್ಲಿ ಪ್ರಧಾನಿ ಮೋದಿ ಸದನದ ಹಾದಿ ತಪ್ಪಿಸಿದರು ಎಂದು ಟೀಕಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿಯವರ ಹುಬ್ಬಳ್ಳಿ ಭೇಟಿಯನ್ನು ಯಶಸ್ವಿಗೊಳಿಸಲು ಬಿಜೆಪಿಯ ಕೇಂದ್ರ ಸಚಿವರುಗಳಾದ ಡಿ.ವಿ. ಸದಾನಂದ ಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗ್ಡೆ ಯವರೇ ಅಲ್ಲದೆ ರಾಜ್ಯದ ನಾಯಕರುಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ, ಆರ್. ಅಶೋಕ ಮೊದಲಾದವರು ಶ್ರಮಿಸುತ್ತಿದ್ದಾರೆ

loading...