ಫೇಕ್ ಸಿಡಿ ಬಿಡುಗಡೆ, ಕಾಂಗ್ರೆಸ್-ಜೆಡಿಎಸ್ ನಾಟಕ : ಅಶ್ವತ್ಥನಾರಾಯಣ್ ಟೀಕೆ

0
3
loading...

ಬೆಂಗಳೂರು:- ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಜೆಟ್ ಮಂಡಿಸುವ ಬಗ್ಗೆ ವಿಶ್ವಾಸವೇ ಇರಲಿಲ್ಲ. ತಮ್ಮ ಸರ್ಕಾರದ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಬಜೆಟ್ ಮಂಡನೆಗೆ ಮೊದಲು ನಮ್ಮ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ದ ನಕಲಿ (ಫೇಕ್) ಆಡಿಯೋ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ನಕಲಿ (ಫೇಕ್) ಸಿಡಿ ಬಿಡುಗಡೆ ಮಾಡುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಹವ್ಯಾಸವಾಗಿದೆ. ಈ ಮೊದಲು ಸಂಸದ ವಿ.ಎಸ್.ಉಗ್ರಪ್ಪ ಅವರು ಶಾಸಕ ಶಿವರಾಮ ಹೆಬ್ಬಾರ್ ಬಗ್ಗೆ ಫೇಕ್ ಆಡಿಯೋ ರಿಲೀಸ್ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದರು. ಯಡಿಯೂರಪ್ಪ ವಿರುದ್ದ ಸ್ಟಿಂಗ್ (ಕುಟುಕು ಕಾರ್ಯಾಚರಣೆ) ಆಪರೇಷನ್ ಮಾಡುವುದಕ್ಕೆ ಸಿದ್ದತೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಸಾಕ್ಷಿ ನೀಡುವುದಾಗಿ ತಿಳಿಸಿದ್ದರು.ಅದಾದ ನಂತರ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ ಎಂದರು.
ಚುನಾವಣೆ ಬಂದಾಗ ಅಂಗಡಿ ತೆರೆದು ಕೂರುವುದು ಜೆಡಿಎಸ್ ಸಂಸ್ಕೃತಿ. ಅದಕ್ಕೆ ಕಳೆದ ಬಾರಿ ವಿಜೂಗೌಡ ಪಾಟೀಲರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲು ಕುಮಾರಸ್ವಾಮಿ 25 ಕೋಟಿ ರೂ.ಕೇಳಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ರಮೇಶ್ ಗೌಡ ಅವರನ್ನು ಎಂಎಲ್ ಸಿ ಮಾಡುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡರೇ ಏನೆಲ್ಲಾ ಹೇಳಿದ್ದರು ಎಂಬುದು ಗೊತ್ತಿದೆ. ಈಗ ಫೇಕ್ ಆಡಿಯೋ ಬಗ್ಗೆ ತನಿಖೆ ನಡೆಸಲಿ ಎಂದು ಯಡಿಯೂರಪ್ಪ‌ ಕೂಡ ಸವಾಲು ಹಾಕಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್-ಜೆಡಿಎಸ್ ನಕಲಿ ಶಾಮರ ತಂಡ ಕಟ್ಟಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಮಗನ ಚಿತ್ರ ಬಿಡುಗಡೆ ಆದ ಮೇಲೆ ಈಗ ಸ್ವತಃ ಮುಖ್ಯಮಂತ್ರಿ ಅವರೇ ಚಿತ್ರ ಮಾಡಲು ಹೊರಟಿದ್ದಾರೆ. ಅವರು ಆಡಿಯೋ ವಿಡಿಯೋ ಸಂಸ್ಥೆ ಮಾಲೀಕರೂ ಹೌದು. ಈಗಲೂ ಸಹ ಯಡಿಯೂರಪ್ಪ ಅವರನ್ನು ಸಿಕ್ಕಿಹಾಕಿಸಲು ಸಂದರ್ಭ ಸೃಷ್ಟಿ ಮಾಡಿ ನಕಲಿ ಆಡಿಯೋ ಸಿಡಿ ಸೃಷ್ಟಿಸಿದ್ದಾರೆ‌. ಕುಮಾರಸ್ವಾಮಿ ಒಬ್ಬ ಬ್ಲಾಕ್‌ ಮೇಲರ್ ಎಂದು ಟೀಕಿಸಿದರು.
ಪ್ರತಿಪಕ್ಷ ಸ್ಥಾನದಲ್ಲಿ ಕೂರಲೂ ಅರ್ಹತೆ ಇಲ್ಲದ 37 ಶಾಸಕರನ್ನು ಹೊಂದಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಬಡಿದಾಡುತ್ತಾರೆ ಎಂದರೆ, 104 ಶಾಸಕರನ್ನು ಹೊಂದಿದ್ದು ಜನಾಶೀರ್ವಾದ ಪಡೆದ ಬಿಜೆಪಿ ಸರ್ಕಾರ ರಚನೆಗೆ ಪ್ರಯತ್ನಿಸಿದರೆ ತಪ್ಪೇನಿದೆ ? ಎಂದು ಆಯನೂರು ಮಂಜುನಾಥ್ ಪ್ರಶ್ನಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೂಲ್ ಬೇಬಿ ಇದ್ದಂತೆ. ಮನೋಹರ ಪರಿಕ್ಕರ್ ವಿಷಯದಲ್ಲಿ ಅವರು ಏನು ಹೇಳಿದ್ದರು ? ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಕಾಂಗ್ರೆಸ್ಸಿಗರು ತಾವು ಸಾಚಾಗಳಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

loading...