ಭೂ ಕುಸಿತ: ಸತತ 7ನೇ ದಿನವೂ ಶ್ರೀನಗರ-ಜಮ್ಮು ಹೆದ್ದಾರಿ ಬಂದ್‌

0
16
loading...

ಶ್ರೀನಗರ: ಭಾರೀ ಹಿಮಪಾತ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ದೇಶದ ಇತರ ಭಾಗಗಳೊಂದಿಗೆ ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸತತ ಏಳನೇ ದಿನವಾದ ಮಂಗಳವಾರ ಕೂಡ ಸಂಪೂರ್ಣ ಬಂದ್‌ ಆಗಿದೆ. ಆದರೆ ಜವಾಹರ್ ಸುರಂಗದ ಮಾರ್ಗದಲ್ಲಿ ಉಂಟಾಗಿದ್ದ ತಡೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರಂತರ ಬಂದ್ ಆಗಿರುವುದರಿಂದ ಸಾವಿರಾರು ಪ್ರಯಾಣಿಕರು ಅರ್ಧದಲ್ಲೇ ಬಾಕಿಯಾಗಿದ್ದು, 5000ಕ್ಕೂ ಅಧಿಕ ಲಾರಿಗಳು, ತೈಲ ಟ್ಯಾಂಕರ್‌ಗಳು ರಸ್ತೆಯಲ್ಲೇ ಉಳಿದುಕೊಂಡಿವೆ. ಪರಿಣಾಮ ಕಾಶ್ಮೀರ ಕಣಿವೆಯಲ್ಲಿ ತರಕಾರಿ, ಕೋಳಿ, ಮಾಂಸ ಮತ್ತಿತರ ಅಗತ್ಯ ವಸ್ತುಗಳ ಕೊರತೆ ಉಂಟಾಗಿದ್ದು, ಸ್ಥಳೀಯ ತರಕಾರಿಗಳ ಬೆಲೆ ಗಗನಕ್ಕೇರಿದೆ.
ಇದೇ ರೀತಿ 434 ಕಿ.ಮೀ.ಉದ್ದದ ಶ್ರೀನಗರ-ಲೇಹ್‌ ರಾಷ್ಟ್ರೀಯ ಹೆದ್ದಾರಿ ಕೂಡ ಬಂದ್ ಆಗಿದ್ದು, ಈ ರಸ್ತೆಯಲ್ಲಿ ಸದ್ಯ ವಾಹನ ಸಂಚಾರ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಅನ್ನು ಜಮ್ಮು ಪ್ರಾಂತ್ಯದ ರಜೌರಿ ಮತ್ತು ಪೂಂಚ್‌ ಜಿಲ್ಲೆಗಳೊಂದಿಗೆ ಸಂಪರ್ಕಿಸುವ 86 ಕಿ.ಮೀ. ಉದ್ದದ ಐತಿಹಾಸಿಕ ಮುಘಲ್ ರಸ್ತೆ ಕೂಡ ಕಳೆದ ಡಿಸೆಂಬರ್‌ ತಿಂಗಳಿನಿಂದ ಭಾರೀ ಹಿಮಪಾತದಿಂದಾಗಿ ಬಂದ್ ಆಗಿದ್ದು, ಈಗಲೂ ಈ ರಸ್ತೆಯಲ್ಲಿ ಮಂಜುಗಡ್ಡೆಯಂತಹ ವಾತಾವರಣ ನಿರ್ಮಾಣವಾಗಿದೆ. ಹಿಮದಿಂದಾಗಿ ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಅನ್ನು ಜಮ್ಮು ಪ್ರಾಂತ್ಯದ ಕಿಶ್ತವರ್‌ಗೆ ಸಂಪರ್ಕಿಸುವ ರಸ್ತೆಯಲ್ಲಿಯೂ ವಾಹನ ಸಂಚಾರ ಸ್ಥಗಿತಗೊಂಡಿದೆ.
ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಲಾರಿಗಳು, ತೈಲ ಟ್ಯಾಂಕರ್‌ಗಳು ಸೇರಿ 5000ಕ್ಕೂ ಅಧಿಕ ವಾಹನಗಳು ನಿಂತಿವೆ. ಈ ರಸ್ತೆಯಲ್ಲಿ ಒಂದು ಕಡೆ ಭೂ ಕುಸಿತ ಉಂಟಾಗುತ್ತಿದ್ದರೆ ಮತ್ತೊಂದು ಕಡೆ ಗುಡ್ಡ ಗುಸಿತ ಉಂಟಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಯುಎನ್ಐಗೆ ತಿಳಿಸಿದ್ದಾರೆ.

loading...