96 ರ ಅಜ್ಜಿಗೆ ಮುಸಂಜೆಯಲ್ಲೂ ಬತ್ತದ ಉತ್ಸಾಹ: ಕಾಯಕವೇ ಕೈಲಾಸ ಎನ್ನುವ ಮಲ್ಲಮ್ಮ !!

0
79

ili vayassinallu battada utsaha ili vayassinallu battada utsaha2 ili vayassinallu battada utsaha1

ಬೈಲಹೊಂಗಲ : 17 ಆಧುನಿಕ ಮಾನವನ ಆಯುಷ್ಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಾ, ಆತನ ಜೀವಿತಾವಧಿಯು ಅರವತ್ತಕ್ಕೆ ಮಾತ್ರ ಸೀಮಿತವಾಗಿ ಬಂದು ನಿಂತಿರುವುದು ನಿಜಕ್ಕೂ ವಿಪರ್ಯಾಸ .ಮಾನವನ ಜೀವನಕ್ರಮ, ಆತನ ಆಹಾರ ಶೈಲಿಯು ಕೂಡಾ ಬದಲಾಗುತ್ತಾ ಬಹಳಷ್ಟು ಒತ್ತಡದ ಜೀವನ ಮದ್ಯೆ ಯಾಂತ್ರಿಕವಾಗಿ ಬದುಕುತ್ತಿರುವುದು ನಿಜಕ್ಕೂ ವಿಷಾದನೀಯ. ಆದರೆ ಇದಕ್ಕೆ ಅಪವಾದವೆಂಬಂತೆ ಜೀವನದ ಸಾಕಷ್ಟು ಸುಖ ದುಖ:ಗಳನ್ನು ಉಂಡು ತನ್ನ ತೊಂಭತ್ತಾರರ ವಯಸ್ಸಿನಲ್ಲೂ ಹದಿ ಹರಿಯದವರನ್ನು ನಾಚಿಸುವಂತ ಲವಲವಿಕೆಯ ಕ್ರಿಯಾಶೀಲ ಅಜ್ಜಿಯೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಡಬಿ ಗಲ್ಲಿಯಲ್ಲಿ ಇದೆ ಎಂದರೆ ತುಂಬಾ ಸೋಜಿಗ.
ಅವಿಭಕ್ತ ಕುಟುಂಬದಲ್ಲಿ ಬಾಳಿ ಬದುಕಿದ ಈ ಅಜ್ಜಿ ಮನೆಯ ಶ್ರೇಯಸ್ಸಿಗೆ ತನ್ನ ಜೀವನವನ್ನೇ ಗಂಧದಂತೆ ತೇಯ್ದಿದ್ದಾಳೆ.ಅದಕ್ಕೆ ಈ ಅಜ್ಜಿ ಎಂದರೆ ಮನೆ ಮಂದಿಗೆಲ್ಲಾ ಪಂಚಪ್ರಾಣ.ಅಂದ ಹಾಗೆ ಈ ಅಜ್ಜಿ ಹುಟ್ಟಿದ್ದು 04-11-1918. ಹೆಸರು ಮಲ್ಲಮ್ಮ ದುಂಡಯ್ಯಾ,ಪುರಾಣಿಕಮಠ.ಮೂವರು ಗಂಡು ಮಕ್ಕಳು,ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ ಈ ಅಜ್ಜಿಗೆ ಬರೋಬ್ಬರಿ 16 ಮೊಮ್ಮಕ್ಕಳು ಹಾಗೂ 16 ಮರಿ ಮೊಮ್ಮಕ್ಕಳು ಹೊಂದಿದ ಹಾಲಿನಂತ ತುಂಬು ಸಂಸಾರ.
ಅಜ್ಜಿಯ ದೊಡ್ಡ ಮಗ ಗಂಗಯ್ಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾಗಿ ಮನೆತನ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಎರಡನೇ ಮಗ ನಾಗಯ್ಯ ಸೈನಿಕ ಸೇವೆ ಮಾಡಿ ನಿವೃತ್ತಿ ಹೊಂದಿದರೆ, ಮೂರನೇ ಮಗ ನಿಜಗುಣಯ್ಯ ಕೃಷಿ ಕೆಲಸ ಮಾಡುತ್ತಾನೆ.ಇವರಲ್ಲಿ ಅಜ್ಜಿಯ ದೊಡ್ಡ ಮಗನಿಗೆ ಈಗ ಎಪ್ಪತ್ತಮೂರು ವರ್ಷ.ಈ ಅಜ್ಜಿಯ,ಮೊಮ್ಮಕ್ಕಳು ರಾಜ್ಯದ ವಿವಿಧೆಡೆ ಇಂಜನೀಯರ,ಲೆಕ್ಚರರ,ಟೀಚರ,ಆಗಿ,ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡು ಅಜ್ಜಿ ಎಲ್ಲರ ಮುಂದೆ ತನ್ನ ಮೊಮ್ಮಕ್ಕಳ ಗುಣಗಾನ ಮಾಡುತ್ತಾಳೆ. ಅಜ್ಜಿಯು ಬೆಳಗ್ಗೆ ಏಳುವಾಗ ದೇವರ ಮಂತ್ರ ಪಠಿಸುತ್ತಾ ಮನೆಯನ್ನೆಲ್ಲಾ ಕಸಗೂಡಿಸಿ, ಎತ್ತುಗಳಿಗೆ ಮೇವು ಹಾಕಿ ಮನೆ ಮಂದಿಗೆಲ್ಲಾ ಸ್ನಾನಕ್ಕೆ ನೀರು ಕಾಯಿಸುವುದರಿಂದ ಹಿಡಿದು ಆ ದಿನದ ದಿನಚರಿ ಆರಂಭವಾಗುತ್ತದೆ.ಜೋಳದ ರೊಟ್ಟಿ ಎಂದರೆ ಈ ಅಜ್ಜಿಗೆ ಪಂಚಪ್ರಾಣ.ಹಳೇ ಕಾಲದ ಸೋಬಾನ ಪದಗಳನ್ನು ಸರಾಗವಾಗಿ ಗಂಟೆಯವರಿಗೆ ಇಂಪಾಗಿ ಹಾಡುವ ಈ ಅಜ್ಜಿ ಹಾಡಲಿಕ್ಕೆ ಆರಂಭಿಸಿದರೆ ಕೇಳುಗರು ಅಜ್ಜಿಯ ಮುಂದೆ ಮಂತ್ರ ಮುಗ್ಧರಾಗಿ ಕುಳಿತುಕೊಂಡು ಬಿಡುತ್ತಾರೆ.ಕೃಷಿಯಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ಈ ಅಜ್ಜಿಗೆ ಎತ್ತು,ಆಕಳು,ಎಮ್ಮೆಗಳೆಂದರೆ ತುಂಬಾ ಪ್ರೀತಿ. ಅವುಗಳ ಮೈ ಸವರಿ ಅವುಗಳಿಗೆ ನೀರು ಕುಡಿಸಿ ಮೇವು ಉಣಿಸುವುದರಲ್ಲಿ ಆನಂದ ಪಡುತ್ತಾಳೆ.
ತನ್ನ ತೊಂಭತ್ತಾರನೇ ವಯಸ್ಸಿನಲ್ಲಿ ಮೊಮ್ಮಗನ ಕಾರಿನಲ್ಲಿ ಹೊಲಕ್ಕೆ ಹೋಗಿ ಬರುವ ಈ ಅಜ್ಜಿ ತಾನು ಹೊಲದಲ್ಲಿ ಕೆಲಸ ಮಾಡುವುದನ್ನು ಸ್ಮರಿಸಿಕೊಳ್ಳುತ್ತಾಳೆ.ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಮುಂತಾದ ದೇಶಭಕ್ತರ ಚಟುವಟಿಕೆಗಳನ್ನು ರಾತ್ರಿ ಕಥೆ ರೂಪದಲ್ಲಿ ಹೇಳುತ್ತಾ ತನ್ನ ಮೂಮ್ಮಕ್ಕಳಿಗೆ ಹಾಗೂ ಮರಿಮೊಮ್ಮಕ್ಕಳಿಗೆ ರಾಷ್ಟ್ತ್ರ ನಾಯಕರ ಆದರ್ಶಗಳನ್ನು ತುಂಬಿ ದೇಶಾಭಿಮಾನ ಮೂಡಿಸುತ್ತಾಳೆ. ಮನೆಗೆ ಬಂದವರೆಲ್ಲರನ್ನು ಸರಾಗವಾಗಿ ಗುರುತು ಹಿಡಿದು ಮಾತನಾಡಿಸುವ ಅಜ್ಜಿಯ ನೆನಪಿನ ಸಾಮರ್ಥ್ಯ ನಿಜಕ್ಕೂ ಮೆಚ್ಚುವಂತಹದು.ಮೊಮ್ಮಕ್ಕಳಿಗೆ ಮಲಗುವಾಗ ರಂಜನೀಯ ನೀತಿ ಕಥೆ ಹೇಳುವ ಈ ಅಜ್ಜಿಯ ಕಥೆ ಕೇಳುವುದೆಂದರೆ ದೊಡ್ಡವರಿಗೂ ಸಹ ಖುಷಿ.ಮಕ್ಕಳಿಗೆ ಮಲಗುವಾಗ ನೈತಿಕ ಕಥೆಗಳನ್ನು ಹೇಳುವ ಅಜ್ಜಿಯರ ಕೆಲಸವನ್ನು ಇಂದಿನ ತಂದೆ ತಾಯಿಯರಿಗೆ ಮಾಡಲಿಕ್ಕಾದರೂ ಸಮಯವಿದೆ ಎಂಬುದನ್ನು ನಾವು ಪ್ರಸ್ತುತ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಈ ವಯಸ್ಸಿನಲ್ಲೂ ಯಾವುದೇ ಮಾತ್ರೆಗಳನ್ನು ನುಂಗದ ಅಜ್ಜಿ ಯಾವುದೇ ಕಾಯಲೆಗಳಿಲ್ಲದೆ ಆರೋಗ್ಯವಾಗಿದ್ದಾಳೆ.ಸುಮಾರು ನಾಲ್ವತ್ತು ವರ್ಷದ ಹಿಂದೆ ಮನೆ ಗೋಡೆ ಸಾರಿಸಲು ಹೋಗಿ ಏಣಿ ಮೇಲಿಂದ ಬಿದ್ದು ಬೆನ್ನು ಮೂಳೆ ಬಾಗಿದೆ.ಬಗ್ಗಿಕೊಂಡೆ ಎಲ್ಲಾ ಕೆಲಸ ಮಾಡುವ ಭಂಗಿ ನಿಜಕ್ಕೂ ತೂಮಕೂರಿನ ಪೂಜ್ಯ ಸಿದ್ದಗಂಗಾ ಶ್ರೀಗಳ ಶರೀರವನ್ನು ನೆನಪಿಸುತ್ತದೆ. ಅಂದಿನ ಕಾಲದ ಮೂರನೇ ತರಗತಿಯನ್ನು ಮಾತ್ರ ಓದಿದ ಈ ಅಜ್ಜಿ ಕನ್ನಡಕವಿಲ್ಲದೇ ಮನೆಗೆ ಬರುವ ಎಲ್ಲಾ ಪತ್ರಿಕೆಗಳನ್ನು ಓದಿ ಮನೆ ಮಂದಿಗೆಲ್ಲಾ ವಿಷಯ ತಿಳಿಸುತ್ತಾಳೆ. ತನಗೆ ಆಗ ಕಲಿಸಿದ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನೆನಪಿಸುತ್ತಾ ಆಗ ಶಾಲೆಯಲ್ಲಿ ಬಾಯಿ ಪಾಠ ಮಾಡಿದ ಬೈಲಹೊಂಗಲ ತಾಲೂಕಿನಲ್ಲಿ ಬರುವ ಸುಮಾರು ನಾಲ್ವತ್ತಕ್ಕೂ ಹೆಚ್ಚು ಹಳ್ಳಿಗಳ ಹೆಸರನ್ನು ಪಠಪಠನೇ ಹೇಳುತ್ತಾಳೆಂದರೆ ಈ ಅಜ್ಜಿಯ ನೆನಪಿನ ಶಕ್ತಿ ಅಪಾರವಾದದ್ದು.
ನಿಜಕ್ಕೂ ಮೌಲ್ಯಗಳ ಪ್ರತಿಬಿಂಬವಾಗಿರುವ ಇಂತಹ ಹಿರಿಯರು ಪ್ರತಿ ಮನೆಯಲ್ಲಿ ಇರಬೇಕು.ಅಂದಾಗ ನಮ್ಮ ಸಂಸ್ಕ್ಕತಿ,ಸಂಪ್ರದಾಯಗಳು ಉಳಿಯುತ್ತವೆ.ಅಂತಹ ಹಿರಿಯರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು.ಇಂದಿನ ಕಾಲದಲ್ಲಿ ಇಷ್ಟು ದೀರ್ಘಾಯುಷಿಗಳನ್ನು ನೋಡುವುದೇ ಒಂದು ಅಪರೂಪ. ಅವರ ಜೀವನಕ್ರಮಗಳು ಇಂದಿನ ಯುವ ಜನಾಂಗಕ್ಕೆ ದಾರದೀಪವಾದಾಗಲೇ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಮಲ್ಲಮ್ಮನಂತ ಅಜ್ಜಿ ಇನ್ನೂ ನೂರಕಾಲ ಬಾಳಿ ಬದುಕಬೇಕಾಗಿದೆ. ಅಂತಹ ಹಿರಿಯರಿಂದ ನಮ್ಮ ಪರಂಪರೆಗಳನ್ನು ಕಾಪಾಡಬೇಕಾಗಿದೆ
ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯು ಇಂತಹ ಹಿರಿಯರನ್ನು ಸಂದರ್ಶಿಸಿ ಅವರಿಂದ ಸೋಬಾನ ಪದ ಜಾನಪದ ಹಾಡುಗಳು,ಗೀಗಿ ಪದಗಳು, ಲಾವಣಿ,ಬೀಸುಕಲ್ಲಿನ ಪದಗಳನ್ನು ಸಂರಕ್ಷಣೆ ಮಾಡಿ ಮುಂದಿನ ಜನಾಂಗಕ್ಕೆ ಅವುಗಳನ್ನು ಕೊಂಡೊಯ್ಯುವ ಕೆಲಸ ಮಾಡಬೇಕಾಗಿದೆ. ನಾಡಿನಲ್ಲಿ ಅತಿ ಹೆಚ್ಚು ಕಾಲ ಬಾಳಿದ ಇಂಥಹ ದೀರ್ಘಾಯುಷಿಗಳನ್ನು ಸತ್ಕರಿಸಿ ಸನ್ಮಾನಿಸುವ ಪರಂಪರೆಯನ್ನು ಸರಕಾರವು ಹಾಕಿಕೊಳ್ಳಬೇಕಾಗಿದೆ. ಅಂದಾಗಲೇ ವಯೋವೃದ್ಧರನ್ನು ಯುವಪೀಳಿಗೆ ಕಳಕಳಿಯಿಂದ ನೋಡಿಕೊಳ್ಳುವ ಮನಸ್ಸು ಯುವ ಜನಾಂಗದಲ್ಲಿ ಬರಬಹುದು ಅಲ್ಲವೇ?

loading...

LEAVE A REPLY

Please enter your comment!
Please enter your name here