loading...

ಕನ್ನಡಮ್ಮ ಸುದ್ದಿ-ಧಾರವಾಡ : ಶೈಕ್ಷಣಿಕ ವರ್ಷವನ್ನು ಮೇ.29 ರಿಂದ ಪ್ರಾರಂಭಿಸಬೇಕು. ಶಾಲೆಯ ಸಂಪೂರ್ಣ ಸಿದ್ಧತೆ ಒಳಗೊಂಡಂತೆ ಜನಪ್ರತಿನಿಧಿಗಳನ್ನು,ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಾಲಕರನ್ನು ಸೇರಿಸಿಕೊಂಡು ಶಾಲಾ ವ್ಯಾಪ್ತಿಯ ಮನೆಗಳಿಗೆ ಪ್ರಭಾತ ಪೇರಿ ಹೋಗುವ ಮೂಲಕ ಶಾಲಾ ದಾಖಲಾತಿ ಆರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಬಿ.ಆರ್.ಸಿ. ಸಭಾಭವನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳ ಸಭೆ ಉದ್ದೇಶಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಸೌಲಭ್ಯಗಳ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಶಿಕ್ಷಣದ ಮಹತ್ವ ತಿಳಿಸಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಶ್ರಮಿಸಬೇಕು. ದಾಖಲಾದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಎಲ್ಲಾ ಮುಖ್ಯ ಗುರುಗಳು ಮತ್ತು ಸಹಶಿಕ್ಷಕರು ಒಗ್ಗಟ್ಟಾಗಿ ಆಟಪಾಠಗಳನ್ನು ನಿರ್ವಹಿಸಬೇಕು. ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಹಾಗೂ ಪಾಲಕರ ಸಹಕಾರದೊಂದಿಗೆ ತಮ್ಮ ಶಾಲೆಗಳನ್ನು ಮಾದರಿಯಾಗಿ ರೂಪಿಸಬೇಕು. ಮೇ16 ರಿಂದ 31 ರವರೆಗೆ ವಿಶೇಷ ದಾಖಲಾತಿ ಆಂದೋಲನ, ಜೂನ್ 1 ರಿಂದ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ಜಿಲ್ಲೆಯಾದ್ಯಂತ ಆಚರಿಸಬೇಕು ಎಂದರು.
ಕ್ಷೇತ್ರ ಶೀಕ್ಷಣಾಧಿಕಾರಿ ಎಸ್.ಎಂ.ಹುಡೇದಮನಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ರೇಖಾ ದೈವಜ್ಞ, ಲತಾ ಮುಳ್ಳೂರ ಹಾಗೂ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

loading...