loading...

ಹುಬ್ಬಳ್ಳಿ: ಮಳೆ ಕೊರತೆಯಿಂದ ಸತತ ಬರಗಾಲದಿಂದ ಬೇಸತ್ತಿರುವ ಧಾರವಾಡ ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅದೆಷ್ಟೋ ಕುಟುಂಬಗಳು ಉದ್ಯೋಗಕ್ಕಾಗಿ ಊರು ತೊರೆದಿವೆ. ಇಷ್ಟಾದರೂ ಕೇವಲ ಪರಿಹಾರದ ಭರವಸೆಯಲ್ಲಿ ದಿನಕಳೆಯುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡುತ್ತಿರುವುದು ಈಗ ಹೊಸದೇನಲ್ಲ.
ಇದರ ಮಧ್ಯೆಯೂ ಸ್ವಾವಲಂಬಿ ಜೀವನ ನಡೆಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ರೂಪದಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಕೆಲ ರೈತರ ಖಾತೆಗಳಿಗೆ ಕೇವಲ 1/-, 10/-, 70/-, 130/- ರೂಪಾಯಿಗಳನ್ನು ಜಮೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ! ಹೌದು, 2016 ರಲ್ಲಿ ಮುಂಗಾರು ವಿಫಲವಾಗಿದ್ದರಿಂದ ಸರ್ಕಾರ ಧಾರವಾಡ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿತ್ತು. ಅದರಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ತಾಲೂಕಿನಾದ್ಯಂತ ಬೆಳೆ ಹಾನಿ ಸಮೀಕ್ಷೆಯನ್ನೂ ಆರಂಭಿಸಿತ್ತು. ಇದರ ಭಾಗವಾಗಿ ಇತ್ತೀಚೆಗೆ ಬೆಳೆ ಪರಿಹಾರದ ರೂಪದಲ್ಲಿ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಸಂಗನಗೌಡ ಕಡ್ಲಿ ಅವರ ಖಾತೆ ಕೇವಲ 1/- ರೂಪಾಯಿ ಜಮೆ ಮಾಡಿದೆ!
ಇದು ಕೇವಲ ಸಂಗನಗೌಡ ಅವರ ಕಥೆ ಅಲ್ಲ. ತಾಲೂಕಿನ ಹಲವು ರೈತರ ಖಾತೆಗಳಿಗೂ ಇದೇ ರೀತಿ ಅತೀ ಕಡಿಮೆ ಹಣ ಜಮೆಯಾಗಿದೆ. 10/-, 70/-, 130 /- ಹೀಗೆ ಸಣ್ಣ ಮೊತ್ತದ ಹಣವನ್ನು ಜಿಲ್ಲಾಡಳಿತ ಬೆಳೆ ಪರಿಹಾರ ರೂಪದಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
15 ರೈತರಿಗೆ ಕಡಿಮೆ ಮೊತ್ತ ಜಮೆ
ಬೆಳೆ ಪರಿಹಾರದ ರೂಪದಲ್ಲಿ ಕೆಲ ರೈತರ ಖಾತೆಗಳಿಗೆ ಜಮೆಯಾಗಿರುವ ಕಡಿಮೆ ಮೊತ್ತ ಕುರಿತು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪರಿಶೀಲಿಸುವ ಭರವಸೆ ಸಿಕ್ಕಿದೆಯೇ ವಿನಃ, ಈವರೆಗೂ ಪರಿಹಾರವಾಗಿಲ್ಲ. ಅಲ್ಲದೆ ಮೂಲಗಳ ಪ್ರಕಾರ ಹಾರೋಬೆಳವಡಿ ಗ್ರಾಮದ ಮಡಿವಾಳಪ್ಪ ಏಣಗಿ, ಈರನಗೌಡ ಸಿದ್ಧನಗೌಡ್ರ, ರುದ್ರಪ್ಪ ಮದ್ವಾಣಿ, ಮಾನಪ್ಪ ಪತ್ತಾರ ಸೇರಿದಂತೆ ಒಟ್ಟು 15 ರೈತರ ಖಾತೆಗಳಿಗೆ ಕಡಿಮೆ ಮೊತ್ತದ ಬೆಳೆ ಪರಿಹಾರ ಜಮೆಯಾಗಿರುವುದು ತಿಳಿದು ಬಂದಿದೆ.ತಾಂತ್ರಿಕ ದೋಷ ಕಾರಣವೇ?
ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದಕ್ಕೆ ತಾಂತ್ರಿಕ ದೋಷ ಕಾರಣವಾಗಿದೆ. ಈ ಮೊದಲು ರೈತರಿಗೆ ಚೆಕ್ ಮೂಲಕ ಬೆಳೆ ಪರಿಹಾರ ವಿತರಿಸಲಾಗುತ್ತಿತ್ತು. ಆದರೆ, ಈಗ ಸರ್ಕಾರ ಪರಿಹಾರ ಎಂಬ ಹೊಸ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿದ್ದು, ಇದರ ಮೂಲಕವೇ ಬೆಳೆ ಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಅದಕ್ಕೂ ಮೊದಲು ರೈತನ ಜಮೀನು, ಬೆಳೆ ಹಾನಿ ಪ್ರಮಾಣ ಸೇರಿದಂತೆ ಸಮಗ್ರ ವಿವರಗಳನ್ನು ಈ ತಂತ್ರಾಂಶದ ಮೂಲಕ ಸರ್ಕಾರಕ್ಕೆ ಒದಗಿಸಬೇಕು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಕೆಲ ರೈತರಿಗೆ ಬೆಳೆ ಪರಿಹಾರ ರೂಪದಲ್ಲಿ ಕಡಿಮೆ ಮೊತ್ತ ಜಮೆಯಾಗಿದೆ ಎಂಬುವುದು ಅಧಿಕಾರಿಗಳ ಸ್ಪಷ್ಟನೆ

loading...