ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರ

0
20
loading...

ಗೋಕಾಕ: ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ಸಮಾಜ ಪುಣ್ಯದ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಶ್ಲಾಘಿಸಿದರು.
ಇಲ್ಲಿಯ ಜೈನ್ ಶ್ವೇತಾಂಬರ ಹಾಗೂ ದಿಗಂಬರ ಜೈನ್ ಸಮಾಜ ಜಂಟಿಯಾಗಿ ನಗರದ ಸಮುದಾಯ ಭವನದಲ್ಲಿ ರವಿವಾರದಂದು ಏರ್ಪಡಿಸಿದ್ದ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ ಮುಂತಾದ ಕ್ಷೇತ್ರಗಳಲ್ಲಿ ಈ ಸಮಾಜ ಅವಿರತವಾಗಿ ಶ್ರಮಿಸುತ್ತಿದೆ. ಬಡವರ ಪಾಲಿಗೆ ಕಾಮಧೇನುವಾಗಿರುವ ಈ ಸಮಾಜದ ಕಾಣಿಕೆ ಅಪರಿಮಿತವಾದದ್ದು. ಅದರಲ್ಲೂ ಗೋಕಾಕದಲ್ಲಿ ಶ್ವೇತಾಂಬರ ಹಾಗೂ ದಿಗಂಬರ ಜೈನ್ ಸಮಾಜಗಳು ಒಂದಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯವೆಂದು ತಿಳಿಸಿದರು.
ಶಾಂತಿ-ಸೌಹಾರ್ದದ ಬೆಳಕು ನೀಡುತ್ತಿರುವ ಜೈನ್ ಸಮಾಜವು ಕಾಶ್ಮೀರದಿಂದ ಕನ್ಯಾಕುಮಾರಿತನಕ ನೂರಾರು ವರ್ಷಗಳಿಂದ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಶುದ್ಧ ತಂಪು ಪಾನೀಯ ಅರವಟಿಕೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡುತ್ತಿದ್ದಾರೆ. ಅಲ್ಲದೇ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಗೋಶಾಲೆಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಈ ಸಮಾಜಕ್ಕಿದೆ. ಮಹಾವೀರರ ತತ್ವ ಆದರ್ಶಗಳನ್ನು ಪರಿಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ವಿಧಿಯ ವಿಕೋಪಕ್ಕೆ ಸಿಲುಕಿ ಕೈಕಾಲು ಕಳೆದುಕೊಂಡು ಜೀವನದಲ್ಲಿ ನಿರಾಶೆರಾದ ಜನರಿಗೆ ಮರುಜನ್ಮ ನೀಡುವ ಸಮಾಜದ ಪ್ರಯತ್ನದ ಸೇವೆ ಸ್ಮರಣೀಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 510 ಜನ ಅಂಗವಿಕಲರಿಗೆ ಪೊಲೀಯೋ ಕ್ಯಾಲಿಪರ್ಸ್, ಸರ್ಜಿಕಲ್ ಬೂಟ್, ಊರುಗೋಲು(ಸ್ಟಿಕ್), ಬೆನ್ನು ನೋವಿನ ಪಟ್ಟಾ ಹಾಗೂ ಮೊಣಕಾಲು ನೋವಿನ ಸಲಕರಣೆಗಳನ್ನು ವಿತರಿಸಿದರು.
ಜೈನ್ ಶ್ವೇತಾಂಬರ ಸಮಾಜದ ಅಧ್ಯಕ್ಷ ಶಹಾ ಇಂದರಮಲ್ ಓಸ್ವಾಲ್, ದಿಗಂಬರ ಜೈನ್ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೇಪಾಟಣ, ಸಂಘವಿ ಓಂಕಾರಮಲ್ ರಾಠೋಡ, ನರೇಂದ್ರ ಪರಮಾರ, ಮಹಾವೀರ ಅರ್ಬನ್ ಸೊಸೈಟಿ ಅಧ್ಯಕ್ಷ ಜಂಬೂರಾವ್ ಭರಮಗೌಡಾ, ರಾಜಸ್ತಾನ ಹಾಸ್ಪಿಟಲ್ ಸಂಚಾಲಕ ಚಂದುಲಾಲ ಜೈನ್, ಬೆಳಗಾವಿಯ ಸಮಾಜದ ಮುಖಂಡ ರಾಜೇಂದ್ರ ಜೈನ್, ರಾಜು ದರಗಶೆಟ್ಟಿ, ಅಶೋಕ ಓಸ್ವಾಲ್, ಪ್ರಕಾಶ ಘೋಂಗಡೆ, ಅಜೀತ ಕಿತ್ತೂರ, ಪ್ರಕಾಶ ರಾಠೋಡ, ಪ್ರೇಮಚಂದ್ ರಾಠೋಡ, ದಿಲೀಪ ಶಹಾ, ಪ್ರವೀಣ ಓಸ್ವಾಲ್, ದಿಲೀಪ ಮೆಳವಂಕಿ, ಸಂತೋಷ ಶಿರಗುಪ್ಪಿ, ಸಂತೋಷ ಹುಂಡೆಕಾರ, ಸೂ ಪಾಶ್ರ್ವನಾಥ ಜೈನ್ ಯುವಕ ಸಂಘದ ಅಧ್ಯಕ್ಷ ಮೋತಿಚಂದ ದರಗಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ನೇಮಿನಾಥ ಅರ್ಬನ್ ಸೌಹಾರ್ದ ಸಹಕಾರಿ, ದಿ. ಮಹಾವೀರ ಅರ್ಬನ್ ಸೌಹಾರ್ದ ಸಹಕಾರಿ ಹಾಗೂ ಅಹ್ಮದಾಬಾದಿನ ರಾಜಸ್ತಾನ ಹಾಸ್ಪಿಟಲ್ ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದವು.

loading...