ಅಂಚೆ ಕಚೇರಿಯಲ್ಲಿ 10 ರೂ. ಕ್ವಾಯಿನ್ ಸ್ವೀಕರಿಸುತ್ತಿಲ್ಲ: ಗ್ರಾಹಕನ ಗೋಳು

0
20
loading...

ಕನ್ನಡಮ್ಮ ಸುದ್ದಿ-ಕುಮಟಾ: ಗ್ರಾಹಕರೊಬ್ಬರು ಗುರುವಾರ ಮನಿ ಆರ್ಡರ್ ಮಾಡಲೆಂದು ಕುಮಟಾದ ಮುಖ್ಯ ಅಂಚೆ ಕಚೇರಿಗೆ ಹೋದಾಗ ಅಲ್ಲಿಯ ಸಿಬ್ಬಂದಿ ನಾವು 10 ರೂ. ಕ್ವಾಯಿನ್ ಸ್ವೀಕರಿಸುವುದಿಲ್ಲ ಎಂದು ಗ್ರಾಹಕಗೆ ಅಚ್ಚರಿ ಮೂಡಿಸಿದ್ದಾರೆ!
ಭಾರತೀಯ ರಿಸರ್ವ್ ಬ್ಯಾಂಕಿಂದ ಈವರೆಗೆ 10 ರೂ ಕ್ವಾಯಿನ್ ಬ್ಯಾನ್ ಆಗಿರುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಕೆಲ ತಿಂಗಳ ಹಿಂದೆ ಈ ಬಗ್ಗೆ ಗೊಂದಲವಾದಾಗ ಬ್ಯಾಂಕಿನವರೇ ತಮ್ಮ ಕಚೇರಿಗಳಲ್ಲಿ ಹತ್ತು ರೂ ಕ್ವಾಯಿನ್ ಸ್ವೀಕರಿಸುತ್ತೇವೆ, ಅದು ಚಲಾವಣೆಯಲ್ಲಿದೆ ಎಂದು ಫಲಕಗಳನ್ನು ಹಾಕಿದ್ದರು. ಅಂತಹ ಫಲಕಗಳನ್ನು ಈಗಲೂ ಕೆಲ ಬ್ಯಾಂಕಲ್ಲಿ ಕಾಣಬಹುದು. ಆದರೆ ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಚೆ ಕಚೇರಿಯಲ್ಲಿ 10 ರೂ ಕ್ವಾಯಿನ್ ಸ್ವೀಕರಿಸದ್ದಕ್ಕೆ ಗ್ರಾಹಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೊಂದ ಗ್ರಾಹಕ `ಕನ್ನಡ ಜನಾಂತರಂಗ’ವನ್ನು ಸಂಪರ್ಕಿಸಿ, “ಅಂಚೆ ಕಚೇರಿಯಲ್ಲಿ 10 ರೂ. ಕ್ವಾಯಿನ್ ಸ್ವೀಕರಿಸುತ್ತಿಲ್ಲ. ಅದು ಬ್ಯಾನ್ ಆದ ಬಗ್ಗೆ ನಿಮಗೇನಾದರು ಮಾಹಿತಿ ಇದೆಯಾ?” ಎಂದು ಕೇಳಿದರು. ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಚೆ ಕಚೇರಿಯಲ್ಲೇ 10 ರೂ. ಕ್ವಾಯಿನ್ ಸ್ವೀಕರಿಸುವುದಿಲ್ಲ ಎಂದಾಗ ಗಲಿಬಿಲಿಗೊಳ್ಳುವ ಸರದಿ ನಮ್ಮದಾಗಿತ್ತು.
ಈ ಕುರಿತು ಕುಮಟಾದ ಮುಖ್ಯ ಅಂಚೆ ಕಚೇರಿಯ ಮಾಸ್ಟರ್ ಮಾರ್ಕಂಡೇಯರನ್ನು ಸಂಪರ್ಕಿಸಿದಾಗ, ನಮ್ಮ ಕಚೇರಿಯಲ್ಲಿ ಸುಮಾರು ರೂ 50,000ದಷ್ಟು ಬೆಲೆಯ 10 ರೂ. ಕ್ವಾಯಿನ್ ಇದೆ. ನಾವು ವ್ಯವಹರಿಸುವ ಸ್ಟೇಟ್ ಬ್ಯಾಂಕಲ್ಲಿ ಆ ಕ್ವಾಯಿನ್ ಸ್ವೀಕರಿಸದ ಕಾರಣ, ನಮ್ಮ ಗ್ರಾಹಕರಿಂದ ಕಚೇರಿಯಲ್ಲಿ ಸಂಗ್ರಹವಾದ ಕ್ವಾಯಿನುಗಳು ನಮ್ಮಲೇ ಬಾಕಿಯಾಗಿದೆ. ಆ ಕಾರಣಕ್ಕೆ ಅನಿವಾರ್ಯವಾಗಿ ನಾವು ಗ್ರಾಹಕರಿಂದ ಕ್ವಾಯಿನ್ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ವಾರದ ಹಿಂದೆಯೇ ಡಿವಿಜನ್ ಆಫೀಸಿಗೆ ಪತ್ರ ಬರೆದಿದ್ದೇವೆ. ಆದರೆ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ” ಎಂದು ತಿಳಿಸಿದ್ದಾರೆ.
ಇದೇ ವಿಷಯವಾಗಿ ಕುಮಟಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಸಂಪರ್ಕಿಸಿದಾಗ, “10 ರೂ ಕಾಯಿನ್ ಸ್ವಲ್ಪ ಪ್ರಮಾಣದಲ್ಲಿದ್ದರೆ ನಾವು ಪಡೆಯುತ್ತೇವೆ. ರಾಶಿರಾಶಿ ಇದ್ದರೆ ಸ್ವೀಕರಿಸುವುದಿಲ್ಲ. ಯಾಕೆಂದರೆ ನಮ್ಮ ಗ್ರಾಹಕರು 10 ರೂ ಕಾಯಿನ್ ಸ್ವೀಕರಿಸುತ್ತಿಲ್ಲ. ಹಾಗಾಗಿ ನಮಗೂ ಅನಿವಾರ್ಯವಾಗಿದೆ” ಎಂದು ಬ್ಯಾಂಕ್ ಅಧಿಕಾರಿ ರಾಜೇಶ್ವರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
“ಆರ್ಬಿಐನಿಂದ ಕಾಯಿನ್ ಬ್ಯಾನ್ ಆಗಿಲ್ಲ, ಬ್ಯಾಂಕ್ ಅಧಿಕಾರಿಯಾಗಿ ನೀವು ಜನರಲ್ಲಿ ಜಾಗೃತಿ ಮೂಡಿಸಬೇಕಲ್ವಾ ?” ಎಂದು ಕೇಳಿದ್ದಕ್ಕೆ “ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಬೇರೆ ಊರಿನ ಜನ ಆ ಕಾಯಿನ್ ಸ್ವೀಕರಿಸುತ್ತಾರೆ. ಆದರೆ ಕುಮಟಾ ಜನ ನಿರಾಕರಿಸುತ್ತಿದ್ದಾರೆ. ಹಾಗಾಗಿ ಈಗ ನಾವೂ ಸ್ವೀಕರಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
ಇದೀಗ `ಕಾಯಿನ್ ಬ್ಯಾನ್’ ಕುಮಟಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಗೊಂದಲಕ್ಕೆ ಕಾರಣವಾದ ಸರ್ಕಾರಿ ಅಧಿಕಾರಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುವ ಕಿಡಿಗೇಡಿಗಳ ವಿರುದ್ಧ ವ್ಯಾಪಾರಿಗಳು ಮತ್ತು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಬಗ್ಗೆ ಹಿರಿಯ ಅಧಿಕಾರಿಗಳು, ಅಂಚೆ ಕಚೇರಿ-ಬ್ಯಾಂಕ್-ಗ್ರಾಹಕರ ನಡುವಿನ ಗೊಂದಲವನ್ನು ಬಗೆಹರಿಸಬೇಕು. ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ್ ಆಗ್ರಹಿಸಿದ್ದಾರೆ.

 

loading...