ರೂ.282.13 ಕೋಟಿ ಜಿ.ಪಂ ಕ್ರೀಯಾ ಯೋಜನೆಗೆ ಅನುಮೋದನೆ

0
3
loading...

ಬಾಗಲಕೋಟೆ: ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕ್ರೀಯಾ ಯೋಜನೆಗೆ ಬುಧವಾರ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ ಜಿಲ್ಲಾ ಪಂಚಾಯತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯಿತು.  ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಒಕ್ಕೋರಲದಿಂದ ಕ್ರೀಯಾಯೋಜನೆಗೆ ಅನುಮೋದನೆ ದೊರೆಯಿತು. ಲೋಕೊಪೋಗಿ ಕಾಮಗಾರಿಗಳಿಗೆ ರೂ.493.76 ಲಕ್ಷ, ಸಾಮಾನ್ಯ ಶಿಕ್ಷಣಕ್ಕೆ ರೂ.13645.21 ಲಕ್ಷ, ಲೋಕಶಿಕ್ಷಣ ರೂ.37.21 ಲಕ್ಷ, ಕ್ರೀಡೆ ಮತ್ತು ಯುವಜನ ಸೇವೆಗಳಿಗೆ ರೂ.133.38 ಲಕ್ಷ, ಕಲೆ ಮತ್ತು ಸಂಸ್ಕøತಿ ರೂ.10 ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳಿಗೆ ರೂ.2743.25 ಲಕ್ಷ, ಆಯುರ್ವೇದ, ಯೋಗ, ಯುನಾನಿ, ಸಿದ್ದ, ಹೋಮಿಯೋಪತಿ ರೂ.247.31 ಲಕ್ಷ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.1359.42 ಲಕ್ಷ, ಪರಿಶಿಷ್ಟ ಜಾತಿಯವರ ಕಲ್ಯಾಣ ರೂ.2058.45 ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರೂ.375.14 ಲಕ್ಷಕ್ಕೆ ಅನುಮೋದನೆ ನೀಡಲಾಯಿತು.  ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿರುವ ಬಗ್ಗೆ ಸದಸ್ಯರು ಸಭೆಗೆ ತಿಳಿಸಿದಾಗ ಈ ಕುರಿತು ಜಿ.ಪಂ ಸಿಇಓ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡದಿರುವ ಹಾಗೂ ಇಪಿಎಪ್, ಇಎಸೈ ಸಮರ್ಪಕವಾಗಿ ಸಿಬ್ಬಂದಿಗಳ ಖಾತೆಗೆ ಜಮಾ ಮಾಡುತ್ತಿರುವ ಬಗ್ಗೆ ಮಾಹಿತಿ ಹಾಗೂ ಸಭೆಯಲ್ಲಿ ಪದೇ ಪದೇ ಗೈರು ಹಾಜರಾಗುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು.  ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಸಿಇಓ ವಿಕಾಸ ಸುರಳಕರ ಸೇರಿದಂತೆ ಜಿ.ಪಂ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...