ಹಾಸನಾಂಬೆ ದರ್ಶನ ಇಂದಿನಿಂದ: ರಾತ್ರಿ ದರ್ಶನಕ್ಕೆ ಅವಕಾಶ

0
5
loading...

ಹಾಸನ:- ಹಾಸನ ನಗರದ ಅಧಿದೇವತೆ, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಗುರುವಾರ ಮಧ್ಯಾಹ್ನ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ನಾಳೆಯಿಂದ ಭಕ್ತರು ಅಹೋರಾತ್ರಿ ದರ್ಶನ ಪಡೆಯಬಹುದಾಗಿದೆ.
ಇಂದಿನಿಂದ ಅಕ್ಟೋಬರ್ 21 ರ ವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ಇಂದು ಮತ್ತು ಅಕ್ಟೋಬರ್ 21ರಂದು ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ. ಈ ಬಾರಿ ಭಕ್ತರು ಮಧ್ಯಾಹ್ನ 1.30 ರಿಂದ 3.30 ರವರೆಗಿನ ಸಮಯ ಹೊರತು ಪಡಿಸಿ ಅಹೋರಾತ್ರಿ ತಾಯಿಯ ದರ್ಶನ ಭಾಗ್ಯ ಪಡೆಯಬಹುದು.
ಈಗಿನ ಹಾಸನ ನಗರವು 12ನೇ ಶತಮಾನದಲ್ಲಿ ಸಿಂಹಾಸನಪುರಿ ಎಂದು ಪ್ರಸಿದ್ಧವಾಗಿತ್ತು. ಕೃಷ್ಣಪ್ಪನಾಯಕ ಎಂಬ ಪಾಳೇಗಾರ ನಗರವನ್ನಾಳುತ್ತಿದ್ದ. ಹಾಸನ ತಾಲ್ಲೂಕಿನಲ್ಲಿರುವ ಕುದುರುಗುಂಡಿಯ ವೀರಭದ್ರೇಶ್ವರ ದೇವಾಲಯದ ಮುಂದೆ ಸಪ್ತಮಾತೃಕೆಯರ ವಿಗ್ರಹಗಳಿದ್ದು, ಇವರು ಹಾಸನಾಂಬೆಯ ಸಹೋದರಿಯರು ಎಂದು ನಂಬಲಾಗಿದೆ.
ಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಆವರಣದಲ್ಲಿ ಹಾಸನಾಂಬೆ ಇತಿಹಾಸದ ಬಗ್ಗೆ ತಿಳಿಸಲಾಗುತ್ತದೆ. ಮೊದಲ ಬಾರಿಗೆ ದೇವಾಲಯದ ಆವರಣದಲ್ಲಿ ಸಿಂಹಾಸನಪುರಿಯ ಐತಿಹಾಸಿಕ ಕಥೆಯ ಬಗ್ಗೆ ಮಾಹಿತಿ (ಹಾಸನ) ಬಿತ್ತರಿಸಲಾಗುವುದು.
ಜಿಲ್ಲಾಡಳಿತ ಜನರಲ್ ಪಾಸ್, ನೀಡುವುದನ್ನು ನಿಲ್ಲಿಸಿದೆ. ಸ್ಥಳೀಯ ರಾಜಕಾರಣಿಗಳು ಹಾಗೂ ಸಂಸದರು ಮತ್ತವರ ಕುಟುಂಬಸ್ಥರಿಗೆ ಮಾತ್ರ ವಿಐಪಿ ಪಾಸ್ ನೀಡಲಾಗುತ್ತಿದೆ. ಜೊತೆಗೆ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸುವುದನ್ನು ನಿಲ್ಲಿಸಿದೆ, ಮುಜರಾಯಿ ಇಲಾಖೆ ಪುಳಿಯೊಗರೆ, ಪೊಂಗಲ್, ರೈಸ್ ಬಾತ್, ಪಾಯಸ ಸೇರಿದಂತೆ 5 ಬಗೆಯ ಪ್ರಸಾದವನ್ನು ಚನ್ನಕೇಶವ ದೇವಾಲಯದಲ್ಲಿ ನೀಡಲಿದೆ.

loading...