ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕುರ್ಚಿಗೆ ಕಂಟಕ

0
8
loading...

ಬೆಂಗಳೂರು: ಕೇರಳದಲ್ಲಿ ನಡೆದ ಬಹುಕೋಟಿ ಸೋಲಾರ್ ಹಗರಣದ ನ್ಯಾಯಾಂಗ ತನಿಖಾ ವರದಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಹೆಸರು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕುತ್ತು ಬರಲಿದೆಯೇ… ಅವರನ್ನು ಬದಲಿಸಿ ಬೇರೆಯವರನ್ನು ನೇಮಕ ಮಾಡಲಾಗುತ್ತದೆಯೇ… ಅಂತಹ ಮಾತುಗಳು ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಕೇಳಿಬರುತ್ತಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಅವ್ಯವಹಾರ, ಅತ್ಯಾಚಾರ, ಲೈಂಗಿಕ ದುರ್ಬಳಕೆ ಸೇರಿದಂತೆ ಗಂಭೀರ ಆರೋಪಗಳನ್ನು ಸರಿತಾ ನಾಯರ್ ಮಾಡಿರುವ ಆರೋಪದ ಪತ್ರವನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ರಾಜ್ಯ ಚುನಾವಣೆ ಉಸ್ತುವಾರಿ ಹೊತ್ತಿರುವ ಕೆ.ಸಿ.ವೇಣುಗೋಪಾಲ್ ಅವರ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಮೇಲೆ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್‍ಅನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಗಂಭೀರ ಆರೋಪ ಕೇಳಿಬಂದಿದ್ದು, ಪ್ರತಿಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಲಿದೆ. ಹಾಗಾಗಿ ಇವರನ್ನು ಬದಲಿಸಿ ಹೈಕಮಾಂಡ್ ಬೇರೆಯವರನ್ನು ನೇಮಕ ಮಾಡುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

loading...