ಕೊಪ್ಪಳ ಜಿಲ್ಲಾಸ್ಪತ್ರೆ ಸ್ವಚ್ಛತೆ ಕಾಪಾಡಿಕೊಳ್ಳಲು ಡಿಸಿ ಕನಗವಲ್ಲಿ ಸೂಚನೆ

0
10
loading...

ಕೊಪ್ಪಳ : ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಆಸ್ಪತ್ರೆ ಕಟ್ಟಡ ಹಾಗೂ ಆವರಣವನ್ನು ಸ್ವಚ್ಛವಾಗಿರಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಆಸ್ಪತ್ರೆಯ ನಿರ್ವಹಣೆ ಹಾಗೂ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.
ನಗರದ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸ್ವಚ್ಛತೆ ಎಂಬುದು ದೂರವಾಗಿದೆ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೆ ಕೊಪ್ಪಳಕ್ಕೆ ಆಗಮಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೂ ಕೂಡ, ಆಸ್ಪತ್ರೆಯ ಸ್ವಚ್ಛತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸ್ವಚ್ಛತೆ ಕೈಗೊಳ್ಳಲು ಇರುವ ತೊಂದರೆಗಳೇನು ಎಂಬುದಾಗಿ ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ ಅವರು ಮಾತನಾಡಿ ಜಿಲ್ಲಾ ಆಸ್ಪತ್ರೆಯನ್ನು 300 ಹಾಸಿಗೆ ಆಸ್ಪತ್ರೆಯನ್ನಾಗಿ ಇಲಾಖೆ ಮೇಲ್ದರ್ಜೆಗೇರಿಸಿದೆ. ಆದರೆ ಅದಕ್ಕೆ ತಕ್ಕಂತೆ ವೈದ್ಯರು ಮತ್ತು ನಾನ್‍ಕ್ಲಿನಿಕಲ್ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿ, ಹುದ್ದೆಗಳ ಮಂಜೂರಾತಿಯನ್ನು ಇದುವರೆಗೂ ನೀಡಿಲ್ಲ. 300 ಬೆಡ್ ಆಸ್ಪತ್ರೆಗೆ 60 ಜನ ಗ್ರೂಪ್-ಡಿ ಸಿಬ್ಬಂದಿಗಳು ಇರಬೇಕು. ಆದರೆ ಈಗಲೂ ಆಸ್ಪತ್ರೆಯಲ್ಲಿ ಕೇವಲ 21 ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಫ್ಟ್ ಆಧಾರದಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಆಸ್ಪತ್ರೆಗೆ ಕಂಪೌಂಡ್ ನಿರ್ಮಾಣ ಆಗದಿರುವುದರಿಂದ, ಸ್ವಚ್ಛತೆಯ ಕೊರತೆ ಹೆಚ್ಚುತ್ತಿದೆ. ಆದರೂ ಇರುವ ಸಿಬ್ಬಂದಿ ಮತ್ತು ವೈದ್ಯರೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ದೊರಕಿಸಲು ಶ್ರಮ ವಹಿಸುತ್ತಿದ್ದಾರೆ. ಆದಷ್ಟು ಶೀಘ್ರ ಆಸ್ಪತ್ರೆಗೆ ಕಂಪೌಂಡ್ ನಿರ್ಮಾಣ ಆಗಬೇಕಿದೆ. ಆಸ್ಪತ್ರೆ ಆವರಣ ಹಾಗೂ ಶೌಚಾಲಯವನ್ನು ಸ್ವಚ್ಛವಾಗಿರಿಸಲು ಸಾರ್ವಜನಿಕರೂ ಕೂಡ ಸಹಕರಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಿಮ್ಸ್ ನಿರ್ದೇಶನ ಡಾ. ಶಂಕರ ಮಲಪುರೆ ಅವರು ಮಾತನಾಡಿ, ಮೆಡಿಕಲ್ ಕಾಲೇಜಿನಲ್ಲಿ ಬೋಧಕರಾಗಿರುವ ವೈದ್ಯರೂ ಕೂಡ, ಆಸ್ಪತ್ರೆಗೆ ತೆರಳಿ, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಖಾಸಗಿ ವೈದ್ಯರ ಮುಷ್ಕರ ಪ್ರಾರಂಭವಾದ ನ. 13 ರಿಂದ ಈವರೆಗೆ ಹೊರರೋಗಿ ವಿಭಾಗದಲ್ಲಿ 4006 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅದೇ ರೀತಿ ಒಳ ರೋಗಿಗಳ ವಿಭಾಗದಲ್ಲಿ 339 ರೋಗಿಗಳ ಚಿಕಿತ್ಸೆಯಾಗಿದೆ. 72 ಹೆರಿಗೆಗಳನ್ನು ಮಾಡಿಸಲಾಗಿದೆ. 29- ಮೆಡಿಕಲ್ ಲೀಗಲ್ ಪ್ರಕರಣಗಳನ್ನು ನಿರ್ವಹಿಸಲಾಗಿದೆ. ಹಾಗೂ 50 ಮೈನರ್ ಹಾಗೂ ಮೇಜರ್ ಸರ್ಜರಿಗಳನ್ನು ಮಾಡಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಕಿಮ್ಸ್‍ನ ಹಲವು ತಜ್ಞ ವೈದ್ಯರುಗಳು ಪಾಲ್ಗೊಂಡಿದ್ದರು.

 

loading...