ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 41,169 ರಷ್ಟು ರ್ಜಿಗಳು ತಿರಸ್ಕಾರ

0
23
loading...

ಕನ್ನಡಮ್ಮ ಸುದ್ದಿ-ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಈವರೆಗೆ 41,169 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿರುವುದು ಆಘಾತಕಾರಿ ಸಂಗತಿಯಾಗಿದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದ್ದು ಒಂದು ತಿಂಗಳೊಳಗೆ ಅರ್ಜಿ ವಿಲೇ ಕಾರ್ಯಕ್ಕೆ ವೇಗ ನೀಡದಿದ್ದರೆ ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಅತಿಕ್ರಮಣದಾರರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಎಚ್ಚರಿಸಿದ್ದಾರೆ.
ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 85,819 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಬುಡಕಟ್ಟು ಜನಾಂಗದ 3,569, ಸಮೂಹ ಉದ್ದೇಶಕ್ಕೆ 3,388 ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಸಂಬಂಧಿಸಿ 78,862 ಅರ್ಜಿಗಳು ಬಂದಿದ್ದವು, ಅವುಗಳಲ್ಲಿ ಶೇ.47.98 ರಷ್ಟು ಅರ್ಜಿಗಳು ತಿರಸ್ಕಾರಗೊಂಡಿವೆ. ಇದರಲ್ಲಿ ನಗರ ಪ್ರದೇಶಗಳ 11,202 ಅರ್ಜಿಗಳೂ ಸಹ ಒಳಗೊಂಡಿದೆ. ತಿರಸ್ಕೃತವಾಗಿರುವ ಅರ್ಜಿಗಳಲ್ಲಿ 1,350 ಬುಡಕಟ್ಟು ಜನಾಂಗಕ್ಕೆ ಸೀಮಿತವಾಗಿದ್ದು, ಸಮೂಹ ಉದ್ದೇಶಕ್ಕೆ 2,261 ಹಾಗೂ ಪಾರಂಪರಿಕ ಅರಣ್ಯವಾಸಿಗಳಿಗೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆ 37,558 ಆಗಿದೆ. ಭಟ್ಕಳದಲ್ಲಿ 6887, ಶಿರಸಿ 5673. ಹೊನ್ನಾವರ 5617, ಕುಮಟಾ 5063, ಸಿದ್ದಾಪುರ 3767, ಯಲ್ಲಾಪುರ 2976, ಅಂಕೋಲಾ 2889, ಜೋಯಿಡಾ 2516, ಕಾರವಾರ 2311, ಹಳಿಯಾಳ 2199, ಮುಂಡಗೋಡ 1281 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಾರಿಗೆ ಬಂದು ಇಲ್ಲಿಯವರೆಗೆ ಜಿಲ್ಲಾದ್ಯಂತ 2852 ಮಂಜೂರಿ ಮಾತ್ರ ದೊರಕಿದ್ದು ಒಟ್ಟೂ ಅರ್ಜಿಗಳಲ್ಲಿ ಶೇ. 3.32 ರಷ್ಟು ಮಾತ್ರ ಮಂಜೂರಿ ದೊರಕಿರುವುದು ಖೇದಕರ. ಮಂಜೂರಿ ದೊರಕಿರುವುದರಲ್ಲಿ 1331 ಪರಿಶಿಷ್ಟ ಪಂಗಡ, ಸಮೂಹ ಉದ್ದೇಶಕ್ಕೆ 1127 ಹಾಗೂ ಕೇವಲ 394 ಪಾರಂಪರಿಕ ಅರಣ್ಯವಾಸಿಗಳಿಗೆ ಮಾತ್ರ ಹಕ್ಕು ದೊರಕಿದೆ. ಯಲ್ಲಾಪುರ 909ಕ್ಕೆ ಮಂಜೂರಿ ದೊರಕಿದ್ದು, ಅವುಗಳಲ್ಲಿ ಬುಡಕಟ್ಟು 632, ಸಮುದಾಯ 211, ಪಾರಂಪರಿಕ 66 ಆಗಿದ್ದು, ಶಿರಸಿಯಲ್ಲಿ ಒಟ್ಟೂ 408, ಮುಂಡಗೋಡ 305, ಭಟ್ಕಳ 217, ಹಳಿಯಾಳ 181, ಅಂಕೋಲಾ 179, ಹೊನ್ನಾವರ 141, ಸಿದ್ದಾಪುರ 138, ಕುಮಟಾ 135, ಕಾರವಾರ 130 ಹಾಗೂ ಜೋಯಿಡಾ 109 ರಂತೆ ಹಕ್ಕುಗಳು ದೊರಕಿವೆ ಎಂದರು. ಜಿಲ್ಲೆಯಾದ್ಯಂತ ಒಟ್ಟೂ 11,202 ಅರ್ಜಿಗಳು ನಗರ/ಪಟ್ಟಣ ಪ್ರದೇಶದಿಂದ ಬಂದಿದ್ದು ಇಲ್ಲಿಯವರೆಗೆ ಒಂದೂ ಅರ್ಜಿಯೂ ವಿಲೇವಾರಿ ಆಗದೇ ಇರುವುದು ಮಂಜೂರಿ ಪ್ರಕ್ರಿಯೆಯಲ್ಲಿನ ಮಂದಗತಿಗೆ ಕೈಗನ್ನಡಿಯಾಗಿದೆ ಎಂದರು. ಈ ವೇಳೆ ಪ್ರಮುಖರಾದ ವೆಂಕಟೇಶ ಬೈಂದೂರ ಹಾಗೂ ತಮ್ಮಾ ಮರಾಠಿ ಉಪಸ್ಥಿತರಿದ್ದರು.
ಒಂದು ತಿಂಗಳ ಕಾಲಾವಕಾಶ….
ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳು ಸಾರಾಸಗಟಾಗಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ಸೂಕ್ತ ನ್ಯಾಯದಾನ ಕೊಡುವ ದಿಶೆಯಲ್ಲಿ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಧಿಯನ್ನು ನಿಗದಿಗೊಳಿಸಿ ಸದ್ರಿ ಕಾಲಮಾನದಂಡದ ಅಡಿಯಲ್ಲಿ ಅರಣ್ಯವಾಸಿಗಳಿಗೆ ನ್ಯಾಯ ದೊರಕದಿದ್ದಲ್ಲಿ ತೀವ್ರ ಹೋರಾಟ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ಮಂಜೂರಿ ಆಶ್ವಾಸನೆ ನೀಡಿ ವೈಫಲ್ಯವಾಗಿರುವ ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

loading...