ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌: ಸಚಿವ ಪಾಟೀಲ

0
9
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಮುಂಬರುವ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪಟಾಪ್‌ ವಿತರಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರು ಹೇಳಿದರು.
ನಗರದ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ನಲ್ಲಿಂದು ವಿಜಯಪುರ ನಗರದ ಸರ್ಕಾರಿ ಪದವಿ ಕಾಲೇಜುಗಳ, ಪಾಲಿಟೆಕ್ನಿಕ್‌ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಉಚಿತ ಲ್ಯಾಪಟಾಪ್‌ ವಿತರಣೆ ಯೋಜನೆಯಡಿ 270 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್‌ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಸಧ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್‌ ವಿತರಣಾ ಯೋಜನೆ ಜಾರಿಗೊಳಿಸಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಈಗಿರುವ 2.5 ಲಕ್ಷ ರೂ.ಗಳ ಕುಟುಂಬದ ವರಮಾನ 5 ಲಕ್ಷ ರೂ.ಗಳಿಗೆ ನಿಗದಿಪಡಿಸಿ ಲ್ಯಾಪಟಾಪ್‌ ವಿತರಿಸಲಾಗುತ್ತದೆ. ಅದರಂತೆ 2.5 ಲಕ್ಷ ರೂ. ಕುಟುಂಬದ ವಾರ್ಷಿಕ ವರಮಾನದ ಹೊಂದಿರುವ ಇತರೆ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತವಾಗಿ ಲ್ಯಾಪಟಾಪ್‌ಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.
ಇಂದಿನ ದಿನಮಾನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಬೇಕು. ಅದರಂತೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಈ ದಿಸೆಯಲ್ಲಿ ರಾಜ್ಯದ ಘನ ಸರ್ಕಾರವು ಬಡ, ಶೋಷಿತ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ದಿಸೆಯಲ್ಲಿ ಉಚಿತ ಲ್ಯಾಪಟಾಪ್‌ ಯೋಜನೆಯಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ನಗರ ಹಾಗೂ ಗ್ರಾಮಾಂತರ ಪ್ರದೇಶದ ಬಡ ಕುಟುಂಬಗಳ ಎಲ್ಲ ಮಕ್ಕಳಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ದೊರೆಯಬೇಕು. ವಿದ್ಯಾರ್ಥಿಗಳಲ್ಲಿಯೂ ಕೂಡ ಕುಟುಂಬಕ್ಕಾಗಿ ಬದುಕುವ ಮತ್ತು ಗೌರವಯುತ ಬದುಕು ಸಾಗಿಸುವ ಛಲ ಹೊಮದಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಲ್ಯಾಪಟಾಪ್‌ದಂತಹ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯ ರೂಪಿಸಲು ನೆರವಾಗುತ್ತಿದೆ. ಈ ವಿಷಯದಲ್ಲಿ ಮಾನ್ಯಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ಕಳಕಳಿಯಿಂದಾಗಿ ಬಡ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌ ಭಾಗ್ಯ ಲಭ್ಯವಾಗಿದೆ. ಇಂದು ಒಟ್ಟು 270 ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌ ವಿತರಿಸಿದ್ದು, ಇದರಲ್ಲಿ 131 ಪ್ರಥಮ ದರ್ಜೆ ಕಾಲೇಜ್‌ ವಿದ್ಯಾರ್ಥಿಗಳಿಗೆ 109 ಸರ್ಕಾರಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಹಾಗೂ 30 ಪ್ರಥಮ ದರ್ಜೆ ಮಹಿಳಾ ಕಾಲೇಜ್‌ ವಿದ್ಯಾರ್ಥಿನಿಯರಿಗೆ ಲ್ಯಾಪಟಾಪ್‌ ವಿತರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ಆಯೋಜಿಸುವ ಮೂಲಕ ಲ್ಯಾಪಟಾಪ್‌ ನಿರ್ವಹನೆ ಕುರಿತು ಅವಶ್ಯಕ ಮಾಹಿತಿ ದೊರಕಿಸುವಂತೆ ಸಲಹೆ ನೀಡಿದರು. ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಲು ಬೃಹತ್‌ ಕಟ್ಟಡಗಳಿಂದ ಸಾಧ್ಯವಿಲ್ಲ. ಶ್ರೇಷ್ಠ ಶಿಕ್ಷಕರಿಂದ ಮಾತ್ರ ಶ್ರೇಷ್ಠ ಸಂಸ್ಥೆ ಮತ್ತು ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯವಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಕಲ್ಪಿಸಬೇಕೆಂದು ಸಲಹೆ ನೀಡಿದ ಅವರು, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ ವಿದ್ಯಾರ್ಥಿನಿಯರಿಗೆ ಅವಶ್ಯಕತೆ ಇರುವ ಮಹಿಳಾ ವಿಶ್ರಾಂತಿ ಗೃಹ, ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರು ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ಘನ ಸರ್ಕಾರ ಉಚಿತ ಲ್ಯಾಪಟಾಪ್‌ ಯೋಜನೆ ಜಾರಿಗೊಳಿಸಿದೆ. ವಿಶ್ವದ ಎಲ್ಲ ವಿಷಯಗಳು, ವಿದ್ಯಮಾನಗಳು ಮತ್ತು ಇತರೆ ಸಮಗ್ರ ಮಾಹಿತಿ ಇದರಲ್ಲಿ ಪಡೆಯಬಹುದಾಗಿದ್ದು, ಇದರ ಸದುಪಯೋಗ ಆಗುವಂತೆ ವಿದ್ಯಾರ್ಥಿಗಳು ನೋಡಿಕೊಳ್ಳಬೇಕು. ಆನ್‌ಲೈನ್‌ ತರಬೇತಿ, ವೃತ್ತಿ ಕೌಶಲ್ಯಕ್ಕೆ ಇಂತಹ ಲ್ಯಾಪಟಾಪ್‌ಗಳ ಮೂಲಕ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಆರ್‌.ಬಿ.ಪವಾರ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಪ್ರಾಚಾರ್ಯ ಡಾ.ಎಂ.ಪಿ.ನಾಯಕ, ಡಿ.ಎಲ್‌.ಚವ್ಹಾಣ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಆರ್‌.ಎಸ್‌.ಕಲ್ಲೂರಮಠ ವಂದಿಸಿದರು. ಮಹಿಳಾ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರ್ಯಾಂಕ್‌ ಪಡೆದ ಕು.ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.

loading...