ಕನ್ನಡಮ್ಮ ಸುದ್ದಿ-ರಾಮದುರ್ಗ: ಕುರುಬ ಮುಖಂಡರಿಗೆ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಯಾಗಲು ಟಿಕೇಟ್ ನೀಡದ್ದಕ್ಕೆ ಈ ಸಾರಿಯ ಚುನಾವಣೆಯಲ್ಲಿ ಕುರುಬ ಸಮಾಜದಿಂದ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಕುರುಬ ಸಮಾಜದ ಯುವ ಘಟಕದ ಅಧ್ಯಕ್ಷ ನಿಂಗಪ್ಪ ಕರಿಗಾರ ಹೇಳಿದರು.
ಸ್ಥಳೀಯ ಪ್ರೆಸ್ ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 5 ಲಕ್ಷದಷ್ಟು ಕುರುಬ ಮತದಾರರಿದ್ದಾರೆ. ಕಳೆದ 2008 ರ ಚುನಾವಣೆಯಲ್ಲಿ ಮತ್ತು 2013 ಚುನಾವಣೆಯಲ್ಲಿ ಕುರುಬ ಜನಾಂಗದ ನಾಯಕರಿಗೆ ಪಕ್ಷಗಳು ಟಿಕೆಟ್ ನೀಡಿಲ್ಲ. ಈ ಸಾರಿಯೂ ಟಿಕೆಟ್ ನೀಡುವ ಲಕ್ಷಣಗಳು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಸಮಾಜದಿಂದ ಕನಿಷ್ಠ ನಾಲ್ಕು ಕಡೆಗಳಲ್ಲಿ ರಾಷ್ಟ್ರೀಯ ಪಕ್ಷಗಳು ಟಿಕೇಟ್ ನೀಡಬೇಕು. ಇಲ್ಲದಿದ್ದರೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಎಲ್ಲ ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಸುರೇಶ ಭೂತಾಳಿ, ಮಲ್ಲಪ್ಪ ಸಿಂದೋಗಿ, ಬೀರಪ್ಪ ಮೋಟೆ, ಮಹಾಂತೇಶ ಹವಳಕೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.