ತುಳಿತಕ್ಕೊಳಗಾದವರ ಆಶಾಕಿರಣ ಅಂಬೇಡ್ಕರ : ಡಿಸಿ ಶಾಂತಾರಾಮ

0
7
loading...

ಬಾಗಲಕೋಟ: ಸಂವಿಧಾನ ಬರುವ ಪೂರ್ವದಲ್ಲಿ ನಮ್ಮ ಜನತೆ ದೇವರ ಹಾಗೂ ಧರ್ಮ ಗ್ರಂಥಗಳ ಮೊರೆ ಹೋಗುತ್ತಿದ್ದು, ಆ ಸಮಯದಲ್ಲಿ ಅನೇಕ ಬಾರಿ ಸತ್ಯಕ್ಕೆ ಸೋಲಾದುದು ಉಂಟು. ಸಂವಿಧಾನ ರಚನೆಯಾದ ನಂತರ ಅಂಬೇಡ್ಕರ ಅವರು ತುಳಿತಕ್ಕೊಳಗಾದವರ ಆಶಾಕಿರಣವಾದರು ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಜಿ.ಪಂ ಸಭಾಭವನದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಅವರ 127ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಮಾತನಾಡಿದ ಅವರು ಬುದ್ದ, ಬಸವ ಧರ್ಮ ಸಂಸ್ಥಾಪನೆ ಮಾಡಿದರೆ, ಅಂಬೇಡ್ಕರ ಸಂವಿಧಾನ ರಚಿಸಿ ಅವರ ಸರಿಸಮಾನರಾಗಿದ್ದು, ಇದು ಆಧುನಿಕ ಭಾರತದ ಧರ್ಮ ಗ್ರಂಥ ಎಂದರೆ ತಪ್ಪಾಗಲಾರದು ಎಂದರು.

ಸಂವಿಧಾನ ಸಮಗ್ರ ವಿಷಯಗಳ ನಿರ್ದೇಶನ ನೀಡುವ ಮಾರ್ಗಸೂಚಿಯಾಗಿದ್ದು ಇದರ ರಚನೆಯಲ್ಲಿ ಅಂಬೇಡ್ಕರ ಅವರಿಗಿದ್ದ ಪ್ರಬುತ್ವತೆ ಎತ್ತಿ ತೋರಿಸುತ್ತದೆ. ಅಂಬೇಡ್ಕರ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು, ದೇಶ-ವಿದೇಶಗಳಲ್ಲಿಯ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಬೇಕಾಗುವಂತ ಸಂವಿಧಾನ ರಚಿಸಿದ್ದಾರೆ. ಅವರು ರಚಿಸಿದ ಸಂವಿಧಾನ ಹಿಂದಿನ, ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಮಾರ್ಗಸೂಚಿಯಾಗಿದೆ. 70 ವರ್ಷಗಳ ಹಿಂದೆ ರಚಿತವಾದ ಈ ಸಂವಿಧಾನ ಅದ್ಬುತವಾದ ನೆಲೆಗಟ್ಟನ್ನು ಹೊಂದಿದೆ ಎಂದರು.
ಕೃಷಿ ಪ್ರಧಾನವಾದ ಭಾರತ ದೇಶಕ್ಕೆ ನೀರಾವರಿ ಹಾಗೂ ನದಿ ಜೋಡನೆ ಮತ್ತು ವಿದ್ಯುತ್ ಉತ್ಪಾದನೆ ಕುರಿತು ಅಚಿದೇ ಆಳವಾದ ಅಧ್ಯಯನ ಮಾಡಿದ್ದರು. 1942ರ ಅವಧಿಯಲ್ಲಿ ದಾಮೋದರ ನದಿಯ ಕನಿವೆಯನ್ನು ರೂಪಿಸಿದ್ದರು. ಇದರಿಂದ 7 ಲಕ್ಷ ಹೆಕ್ಟರ ಜಮೀನಿಗೆ ನೀರಾವರಿ ಭಾಗ್ಯ ದೊರಕಿತು. ಅಂತರರಾಜ್ಯ ನದಿ ನೀರು ಉಪಯೋಗ, ನೀರಿನ ಸಮಸ್ಯೆಗೆ ಪರಿಹಾರ, ಭಾರತದ ತ್ವರಿತಗತಿಯಲ್ಲಿ ಅಭಿವೃದ್ದಿಯಾಗುವ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ಖಾಸಗಿ ಕೈಗಾರಿಕೆಗಳಿಗೆ ಅನುಮತಿ ಮುಂತಾದವುಗಳು ಗಮನ ಸೆಳೆದಿದ್ದವು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿ.ಪಂ ಸಿಇಓ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ.ವಿ.ಚೈತ್ರಾ ಸ್ವಾಗತಿಸಿದರು. ಬಿ.ಜಿ.ನಿಂಗಪ್ಪನವರ  ವಂದಿಸಿದರು.

loading...