ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಆಗ್ರಹಿಸಿ ಪ್ರತಿಭಟನೆ

0
13
loading...

ಕನ್ನಡಮ್ಮ ಸುದ್ದಿ-ಶಿರಸಿ: ರಾಜ್ಯದ ಎಲ್ಲಾ ವರ್ಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ಶಾಖೆಯಿಂದ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.
ನಗರದ ನೀಲಕಣೆ ವೃತ್ತದಲ್ಲಿ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಕಂಡಿ ಮಾತನಾಡಿ, ಹಿಂದಿನ ರಾಜ್ಯ ಸರ್ಕಾರವು ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅನುಕೂಲವಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ನೀಡುವುದಾಗಿ ಹೇಳಿತ್ತು. 2018-19ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್‍ನ್ನು ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳದೆ, ಹಿಂದಿನ ಬಜೆಟ್‍ನ ವಿರುದ್ಧವಾಗಿ ವಿದ್ಯಾರ್ಥಿ ವಿರೋಧಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ರಾಜ್ಯದಲ್ಲಿ ಬಸ್ ಪಾಸ್ ಪಡೆಯುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರೇ ಹೆಚ್ಚಿದ್ದಾರೆ. ಆದ್ದರಿಂದ ರಾಜ್ಯದಲ್ಲಿನ ಎಲ್ಲಾ ವರ್ಗದ, ಎಲ್ಲಾ ಸ್ತರದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಗೆ ಉಚಿತ ಬಸ್‍ಪಾಸ್ ನೀಡಬೇಕೆಂದು ಹಾಗೂ ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಕೆಲವೊಂದು ಜಿಲ್ಲೆಗಳಲ್ಲಿ ಇನ್ನೂ ಬಸ್‍ಪಾಸ್‍ಗಳು ವಿತರಣೆಯಾಗುತ್ತಿಲ್ಲ. ಆದ್ದರಿಂದ ಬಸ್‍ಪಾಸ್ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಖ್ಯ ಮಂತ್ರಿಗಳಿಗೆ ಆಗ್ರಹಿಸಿದರು. ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಗಣಪತಿ ತೇತಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶೋಭಾ ಗೌಡರ್, ತಾಲೂಕಾ ಎಸ್.ಎಫ್.ಡಿ ಪ್ರಮುಖ ನಂದನ್ ಶೇಟ್, ಕಾರ್ಯಕರ್ತರಾದ ಶ್ರೀಧರ ನಾಯ್ಕ, ಹೇಮಂತ ಜೋಗಳೇಕರ್, ರಾಧಾ ಪೂಜಾರಿ, ಸುಮನಾ ನಾಯ್ಕ, ಭವ್ಯಾ ಗೌಡಾ, ಚಂದ್ರಕಲಾ ಬಡಗಿ, ತನುಜಾ ಗೌಡ, ಯಮುನಾ ಮರಾಠಿ, ಚೈತ್ರಾ, ಅಕ್ಷತಾ, ಕೀರ್ತಿ ಹಾಗೂ ನೀಲೆಕಣಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

loading...