ಅಂಗನವಾಡಿ ಕೇಂದ್ರಗಳಲ್ಲಿ “ಮಾಸ್ಟರ್ ಕಿಟ್ ಬ್ಯಾಗ” ಭಾಗ್ಯ

0
63

ಗರ್ಭಿಣಿ, ಬಾಣಂತಿ, ಕಿಶೋರಿಯರಿಗೆ ಕಿಟ್ ವಿತರಣೆ | ಮುಂದಿನ ತಿಂಗಳಿಂದ ಪ್ರಾರಂಭ
| ಚಂದ್ರಶೇಖರ ಸೋಮಣ್ಣವರ
ಶಿರಹಟ್ಟಿ: ಅಂಗನವಾಡಿಯ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ವಿತರಿಸಲಾಗುತ್ತಿದ್ದ ಪೂರಕ ಹಾಗೂ ಪೌಷ್ಠಿಕ ಆಹಾರವನ್ನು ಇನ್ನು ಮುಂದೆ ಮಾಸ್ಟರ್ ಕಿಟ್ ಬ್ಯಾಗ ಮೂಲಕ ವಿತರಿಸುವ ನೂತನ ವ್ಯವಸ್ಥೆ ಗದಗ ಜಿಲ್ಲಾದ್ಯಂತ ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ.
ಹೌದು ಮಹಿಳೆಯರಿಗೆ ನೀಡಲಾಗುವ ಗೋಧಿರವಾ, ಬೆಲ್ಲ, ಅಕ್ಕಿ, ಹೆಸರುಕಾಳು, ಗೋಧಿಹಿಟ್ಟು, ತೊಗರಿಬೇಳೆ ಇತ್ಯಾದಿ ಆಹಾರ ಪದಾರ್ಥಗಳನ್ನು ಇಲ್ಲಿಯವರೆಗೂ ಪ್ರತ್ಯೇಕವಾಗಿ ವಿತರಿಸಲಾಗುತ್ತಿತ್ತು. ಈ ರೀತಿ ವಿತರಿಸಲಾಗುವ ಆಹಾರ ಪದಾರ್ಥಗಳು ಕೆಲವು ಕಡೆಗೆ ಸರಿಯಾಗಿ ವಿತರಣೆಯಾಗುತ್ತಿರಲಿಲ್ಲ ಹಾಗೂ ಗುಣಮಟ್ಟ ಮತ್ತು ತೂಕದಲ್ಲೂ ಸಹ ಬಹಳಷ್ಟು ವ್ಯತ್ಯಾಸ ಕಂಡು ಬಂದು ಸಾರ್ವಜನಿಕರಿಂದ ಹಲವಾರು ಬಗೆಯ ದೂರುಗಳು ಹಾಗೂ ಆರೋಪಗಳು ಹಲವಾರು ಕಡೆಗೆ ಕೇಳಿಬರುತ್ತಿದ್ದವು.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ನೂತನವಾಗಿ ರಾಜ್ಯಾದ್ಯಂತ ಮಾಸ್ಟರ್ ಕಿಟ್ ಬ್ಯಾಗ ರೂಪದಲ್ಲಿ ಎಲ್ಲಾ ಆಹಾರ ಪದಾರ್ಥಗಳನ್ನೊಳಗೊಂಡ ಪ್ಯಾಕಿಂಗ್ ಮಾಡಿದ ಒಂದೇ ಬ್ಯಾಗಿನಲ್ಲಿ ಆಹಾರ ಪದಾರ್ಥಗಳನ್ನು ವಿತರಿಸುವ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಈ ವ್ಯವಸ್ಥೆ ಇದೇ ಅಗಸ್ಟ್ ತಿಂಗಳು ಅಥವಾ ಮುಂದಿನ ತಿಂಗಳು ಸಪ್ಟಂಬರನಿಂದ ಜಾರಿಗೆ ಬರಲಿದೆ.
ಸರಕಾರದ ನೂತನ ಆದೇಶದ ಪ್ರಕಾರ ಅಂಗನವಾಡಿಯ ಕೇಂದ್ರದ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿ, ಕಿಶೋರಿಯರಿಗೆ ಒಂದು ತಿಂಗಳಿಗೆ ಮನೆಗೆ ವಿತರಿಸುವ ಆಹಾರ ಪದಾರ್ಥಗಳನ್ನು ಒಂದೇ ಬ್ಯಾಗಿನಲ್ಲಿ ಹಾಕಿ ಅದನ್ನು ಪಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆಯೊಂದಿಗೆ ಬ್ಯಾಗಿನ ಮೇಲೆ ವಿತರಿಸುತ್ತಿರುವ ಆಹಾರ ಪದಾರ್ಥಗಳ ಹೆಸರು ಮತ್ತು ಪ್ರಮಾಣವನ್ನು ನಮೂದಿಸುವುದು ಹಾಗೂ ಮಕ್ಕಳಿಗೆ ವಿತರಿಸುವ ಬ್ಯಾಗಿನ ಮೇಲೆ ಮಗುವಿನ ಚಿತ್ರ ಹಾಗೂ ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಿಗೆ ವಿತರಿಸುವ ಬ್ಯಾಗಿನ ಮೇಲೆ ಮಹಿಳೆಯರ ಚಿತ್ರ ಮುದ್ರಿಸುವುದು.
ಹಾಗೇಯೆ ಎಲ್ಲಾ ಆಹಾರ ಪದಾರ್ಥಗಳನ್ನು ಒಂದು ಬ್ಯಾಗಿನಲ್ಲಿ ಹಾಕಿದ ನಂತರ ಅದನ್ನು ತೆರೆಯದೆ ಇರುವಂತೆ ಎಮ್‍ಎಸ್‍ಪಿಟಿಸಿ ಕೇಂದ್ರಗಳಲ್ಲಿ ಪ್ಯಾಕ ಮಾಡಿದ ನಂತರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ಸರಬರಾಜು ಮಾಡಿ ಅಲ್ಲಿಂದ ನೇರವಾಗಿ ಅಂಗನವಾಡಿಯ ಕೇಂದ್ರಗಳಿಗೆ ಪೂರೈಸುವಂತೆ ಹಾಗೂ ನಿಗದಿಪಡಿಸಿದ ತೂಕದಲ್ಲಿ ಯಾವುದೇ ಕಾರಣಕ್ಕೂ ಸಹ ವ್ಯತ್ಯಾಸ ಕಂಡು ಬರಬಾರದು ಮತ್ತು ಸದರಿ ಆಹಾರ ಪದಾರ್ಥಗಳನ್ನು ಮನೆಗೆ ವಿತರಿಸಿದಾಗ ಆಹಾರ ಪದಾರ್ಥಗಳನ್ನು ಸ್ವೀಕರಿಸಿದ ಬಗ್ಗೆ ಪಲಾನುಭವಿಗಳಿಂದ ಅಥವಾ ಅವರ ಪೋಷಕರಿಂದ ಕಡ್ಡಾಯವಾಗಿ ಸ್ವೀಕೃತಿಯನ್ನು ಪಡೆಯುವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.
ಬ್ಯಾಗಿನಲ್ಲಿ ಪ್ಯಾಕ ಮಾಡಿದ ಆಹಾರ ಪದಾರ್ಥಗಳ ಮಾಹಿತಿ ಹೀಗಿರಲಿದೆ: ಆರು ತಿಂಗಳಿಂದ ಮೂರು ವರ್ಷದ ಸಾಮಾನ್ಯ ಹಾಗೂ ಸಾಧಾರಣ ಮಕ್ಕಳಿಗೆ 3330 ಗ್ರಾಂ ಅಕ್ಕಿಯ ಖೀರು ಮಿಶ್ರಣ ಹಾಗೂ 200 ಗ್ರಾಂ ಸಕ್ಕರೆ ಆರು ತಿಂಗಳಿಂದ ಮೂರು ವರ್ಷದ ವಿಪರೀತ ಕಡಿಮೆ ತೂಕದ ಮಕ್ಕಳಿಗೆ 5032 ಗ್ರಾಂ ಅಕ್ಕಿಯ ಖೀರು ಮಿಶ್ರಣ ಹಾಗೂ 300 ಗ್ರಾಂ ಸಕ್ಕರೆ ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಿಗೆ 1560 ಗ್ರಾಂ ಗೋಧಿಯ ರವಾ, 1536 ಗ್ರಾಂ ಬೆಲ್ಲ, 1600 ಗ್ರಾಂ ಅಕ್ಕಿ, 688 ಗ್ರಾಂ ಹೆಸರುಕಾಳು, 1375 ಗ್ರಾಂ ಗೋಧಿಯ ಹಿಟ್ಟು, ಹಾಗೂ 125 ಗ್ರಾಂ ತೊಗರಿಬೇಳೆ ವಿತರಿಸಲಾಗುತ್ತದೆ.
ಬಾಕ್ಸ್:
ಒಂದೇ ಬ್ಯಾಗಿನಲ್ಲಿ ಎಲ್ಲಾ ಆಹಾರ ಪದಾರ್ಥಗಳನ್ನು ವಿತರಿಸುವ ನೂತನ ವ್ಯವಸ್ಥೆ ಜಾರಿಗೆ ಬಂದಿರುವುದು ಬಹಳಷ್ಷು ಒಳ್ಳೆಯದಾಗಿದ್ದು ಗರ್ಭಿನಿ, ಬಾನಂತಿ, ಮಕ್ಕಳಿಗೆ ವಿತರಣಾ ವ್ಯವಸ್ಥೆಯಲ್ಲಾಗುವ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗಿದೆ.
-ಮಂಜುಳಾ ಕಾಮತ್, ಪ್ರಭಾರಿ ಸಿಡಿಪಿಒ, ಶಿರಹಟ್ಟಿ

loading...