ಅಕಾಲಿಕ ಮಳೆಯಿಂದ ಫಸಲಿಗೆ ಬಂದ ಬೆಳೆ ಹಾನಿ

0
49

ಬೆಳಗಾವಿ, ಡಿ.18- ಅಕಾಲಿಕ ಮಳೆಯಿಂದ ಫಸಲಿಗೆ ಬಂದ ಬೆಳೆ ಹಾನಿಯಾಗಿದ್ದು, ಈ ಕುರಿತು ಸರ್ವೇ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿಯಿಂದ ವರದಿ ಬಂದ ನಂತರ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನಸಭೆ ಕಲಾಪ ಆರಂಭದಲ್ಲೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಯ ಪ್ರಸ್ತಾಪಿಸಿ, ರಾಜ್ಯದ ನಾನಾ ಕಡೆ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತರು ಆತಂಕದಲ್ಲಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ತಾತ್ಕಾಲಿಕ ಪರಿಹಾರ ಪಾವತಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಪತ್ತು ನಿರ್ವಹಣಾ ಕಾರ್ಯದರ್ಶಿ ಮೂಲಕ ಸಂಬಂಧಿಸಿದ ಎಲ್ಲ ಜಿಲ್ಲಾಧಿಕಾರಿಗಳಿಗೆ ಬೆಳೆ ಹಾನಿ ಸರ್ವೇ ಮಾಡಲು ಸೂಚಿಸಲಾಗಿದೆ. ಕಂದಾಯ ಇಲಾಖೆ ಸಮೀಕ್ಷೆ ವರದಿ ಬಂದ ನಂತರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿಗಳ ಜತೆ ಅಕಾಲಿಕ ಮಳೆಯಿಂದಾಗಿರುವ ಹಾನಿಯ ಬಗ್ಗೆ ಚರ್ಚಿಸಲಾಗಿದೆ. ಕಟಾವು ಮಾಡಿದ ಬೆಳೆಗಳು ಹಾಗೂ ಬೆಳೆದು ನಿಂತ ಫಸಲಿಗೂ ಹಾನಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ವಿಷಯ ಪ್ರಸ್ತಾಪಿಸಿದ ಶೆಟ್ಟರ್, ಶಿವಮೊಗ್ಗ, ಕೊಪ್ಪಳ, ಗುಲ್ಬರ್ಗ ಸೇರಿದಂತೆ ಹಲವು ಕಡೆಗಳಲ್ಲಿ ಅಕಾಲಿಕ ಮಳೆ ಬಿದ್ದು, ಬತ್ತ, ಅಡಿಕೆ, ತೊಗರಿ, ಜೋಳ, ಕಡ್ಲೆ, ಕಾಫಿ ಮತ್ತಿತರ ಬೆಳೆಗಳು ಹಾನಿಗೀಡಾಗಿದ್ದು, ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜೆಡಿಎಸ್‍ನ ಎಂ.ಟಿ.ಕೃಷ್ಣಪ್ಪ ಮತ್ತಿತರರು ದನಿಗೂಡಿಸಿದರು.
ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ಅಕಾಲಿಕ ಬೆಳೆಯಿಂದಾದ ಹಾನಿ, ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಸದನದಲ್ಲಿ ಹೇಳಿಕೆ ನೀಡುವಂತೆ ಸೂಚಿಸಿದರು. ಆಗ ಕೃಷಿ ಸಚಿವರು ಅದಕ್ಕೆ ಒಪ್ಪಿಗೆ ಸೂಚಿಸಿ ಸದನದಲ್ಲಿ ಹೇಳಿಕೆ ನೀಡುವ ಭರವಸೆ ನೀಡಿದರು.

loading...

LEAVE A REPLY

Please enter your comment!
Please enter your name here