ಅಕ್ಕನ ವಚನದಲ್ಲಿ ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಿವೆ

0
59

ಕನ್ನಡಮ್ಮ ಸುದ್ದಿ-ಧಾರವಾಡ : ಚಿಕ್ಕ ವಯಸ್ಸಿನಲ್ಲಿಯೇ ಲೌಕಿಕ ಜಗತ್ತನ್ನು ದಿಕ್ಕರಿಸಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ವೀರವಿರಾಗಿಣಿ ಅಕ್ಕಮಹಾದೇವಿ ಜಗತ್ತಿನ ಮೊದಲ ಮಹಿಳಾ ಕವಯಿತ್ರಿಯಾಗಿರುವುದು ಮಹಿಳೆಯರಿಗೆ ಹೆಮ್ಮೆಯ ವಿಷಯ ಎಂದು ಪ್ರಾಧ್ಯಾಪಕಿ ಡಾ.ರೇಖಾ ಕೋಟೂರ ಹೇಳಿದರು.
ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿರುವ ಬಸವಶಾಂತಿ ಮಿಶನ್ ಕ್ಯಾಂಪಸ್‍ದಲ್ಲಿ ಏರ್ಪಡಿಸಿದ ಅಕ್ಕಮಹಾದೇವಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಕ್ಕನ ವಚನದಲ್ಲಿ ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಿದ್ದು ಸರ್ವಜನರಿಗೂ ಮಾರ್ಗದರ್ಶಿಯಾಗಿವೆ. ಅಕ್ಕ ರಚಿಸಿದ ಅನೇಕ ವಚನಗಳಲ್ಲಿ ಲೋಕಾನುಭವ ಹಾಗೂ ಜ್ಞಾನಸಂಪತ್ತು ಮತ್ತು ಅಭಿವ್ಯಕ್ತಿತ್ವತೆ ಕಂಡು ಬರುತ್ತದೆ. ಸರ್ವ ಸಮಾನತೆ ಹಾಗೂ ವೈಚಾರಿಕತೆ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವ ಕಾರ್ಯದೊಂದಿಗೆ ಅಂದಿನ ಅನುಭವ ಮಂಟಪಕ್ಕೆ ಆಗಮಿಸಿದ ಅಕ್ಕನ ಹಿರಿಮೆ ಮೆಚ್ಚುವಂತದ್ದು ಎಂದರು.
ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಅಧ್ಯಕ್ಷ ಪ್ರೊ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆವಹಿಸಿ ಮಾತನಾಡಿ, 12 ನೇ ಶತಮಾನದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದ ಸಮಯದಲ್ಲಿ ಸಾಹಿತ್ಯವನ್ನೆ ಕೃಷಿ ಮಾಡಿ ಅಲೌಕಿಕ ಸ್ಥಾನ ಹೊಂದಿದ ಅಕ್ಕನನ್ನು ನೆನೆಯುವುದು ಅತೀ ಅವಶ್ಯವಾಗಿದೆ. ಬದುಕನ್ನು ಅರ್ಥೈಸಿಕೊಳ್ಳುವ ಹಾಗೂ ನಡೆನುಡಿಗಳ ಅನುಭವದ ಮಾತುಗಳನ್ನು ವಚನ ಸಾಹಿತ್ಯದ ರೂಪದಲ್ಲಿ ಇಡೀ ಮಾನವ ಕುಲಕ್ಕೆ ಅವರು ಉತ್ತಮ ಸಂದೇಶ ಸಾರಿದ್ದಾರೆ ಎಂದರು.
ಬಸವಶಾಂತಿ ಮಿಶನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಧರ ಕುಲಕರ್ಣಿ, ಅರ್ಜುನ ವಠಾರ, ಮಂಜುನಾಥ ಪಾಟೀಲ, ವೀರಣ್ಣ ಒಡ್ಡೀನ, ಚನಬಸಪ್ಪ ಕಗ್ಗಣ್ಣವರ, ವೀರಣ್ಣ ಗಟಿಗೆಣ್ಣವರ ಉಪಸ್ಥಿತರಿದ್ದರು. ಮಂಜುಳಾ ಪ್ಯಾಟಿಶೆಟ್ಟರ ನಿರೂಪಿಸಿದರು. ಪ್ರೇಮಾ ಹೊರಟ್ಟಿ ಸ್ವಾಗತಿಸಿದರು. ಡಾ.ಪ್ರೀಯಾ ವಂದಿಸಿದರು. ಡಾ.ಜ್ಯೋತಿಲಕ್ಷ್ಮೀ.ಡಿ.ಪಿ ಹಾಗೂ ಸಂಗಡಿಗರಿಂದ ವಚನ ಸಂಗೀತ ಜರುಗಿತು.

loading...