ಅತಿಕ್ರಮಣದಾರರ ಅರ್ಜಿ ಸಮಗ್ರವಾಗಿ ಪುನರ್‌ ಪರಿಶೀಲನೆಗೆ ಆಗ್ರಹಿಸಿ ಮನವಿ

0
23

ಮುಂಡಗೋಡ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ಅತಿಕ್ರಮಣದಾರರ ಅರ್ಜಿಗಳನ್ನು ಸಮಗ್ರವಾಗಿ ಪುನರ್‌ ಪರಿಶೀಲನೆಗೆ ಆಗ್ರಹಿಸಿ ಪ್ರಮುಖ 5 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಅರಣ್ಯ ಅತಿಕ್ರಮಣದಾರರ ಬೃಹತ್‌ ರ್ಯಾಲಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುತ್ತಿಗೆ, ಅಧಿಕಾರಿಯ ಗೈರು ಹಾಜರಿಗೆ ಉಗ್ರ ಪ್ರತಿಭಟನೆ, ಮಾತಿನ ಚಕಮಕಿ ಸೇರಿದಂತೆ ಅರಣ್ಯ ಅತಿಕ್ರಮಣದಾರರ ಹೋರಾಟ ಅಕ್ಷರಶ ರಣರಂಗವಾಗಿ ಮಾರ್ಪಟ್ಟಿತ್ತು.
ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಆಗಮಿಸಿದ ಅರಣ್ಯ ಅತಿಕ್ರಮಣದಾರರು ಇಲ್ಲಿಯ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ತೆರಳಿ ಮನವಿ ಸಲ್ಲಿಸಲು ಮುಂದಾದರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ಗೈರಾಗಿದ್ದರಿಂದ ಕಛೇರಿಯ ಸಹಾಯಕ ಅಧಿಕಾರಿಗಳು ಮನವಿ ಸ್ವೀಕರಿಸಲು ಮುಂದಾದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು, ತಕ್ಷಣ ಹಿರಿಯ ಅಧಿಕಾರಿಗಳು ಬಂದು ತಮ್ಮ ಸಮಸ್ಯೆಯನ್ನು ಆಲಿಸಿ ಸೂಕ್ತ ಪರಿಹಾರದ ಉತ್ತರ ನೀಡಬೇಕೆಂದು ಪಟ್ಟು ಹಿಡಿದರು.
ಹಿರಿಯ ಅಧಿಕಾರಿಗಳ ಸಭೆ ನಿಮಿತ್ತ ಶಿರಸಿಗೆ ಹೋಗಿದ್ದ ಅಧಿಕಾರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ತಕ್ಷಣ ಬರುವಂತೆ ತಿಳಿಸಲಾಯಿತು. ಸುಮಾರು ಒಂದು ಘಂಟೆಯಾದರೂ ಅಧಿಕಾರಿ ಬರದೆ ಇದ್ದಾಗ ಪ್ರತಿಭಟನಾನಿರತರು ಕಛೇರಿಯೊಳಗೆ ನುಗ್ಗಲು ಯತ್ನಿಸಿದರು. ಅದನ್ನು ತಡೆದ ಪೊಲೀಸರು, ಕೆಲವೇ ಕ್ಷಣಗಳಲ್ಲಿ ಅಧಿಕಾರಿಗಳು ಸ್ಥಳಕ್ಕಾಗಮಿಸಲಿದ್ದಾರೆ. ಸಂಯಮದಿಂದ ಇರುವಂತೆ ಮನವಿ ಮಾಡಿದರು. ಪ್ರತಿಭಟನಾ ರ್ಯಾಲಿ ಸಭೆಯನ್ನಾಗಿ ಪರಿವರ್ತನೆ ಗೊಂಡಂತಹ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಮಾತನಾಡಿ, ಅರಣ್ಯ ಹಕ್ಕು ದೊರಕಿಸಿ ಕೊಡುವಲ್ಲಿ ಸಾಂಘಿಕ ಮತ್ತು ಕಾನೂನಾತ್ಮಕವಾದ ಹೋರಾಟವನ್ನು ಮುಂದುವರೆಸಲಾಗುವುದಲ್ಲದೇ ಮಂಜೂರಿ ಪ್ರಕ್ರಿಯೆಯಲ್ಲಿ ಶಾಸಕರು ನಿರ್ಲಕ್ಷ್ಯತನ ತೋರುತ್ತಿರುವುದು ವಿಷಾದಕರ. ಅರಣ್ಯ ಭೂಮಿ ಮಂಜೂರಿಗೆ ಅರಣ್ಯವಾಸಿಗಳ ಪರವಾದ ಇಚ್ಛಾಶಕ್ತಿ ತೋರಿಸಬೇಕಿತ್ತು. ಅದರಲ್ಲಿಯೂ ಸ್ಥಳಿಯ ಶಾಸಕರಿಗೆ ಜನರ ಹಿತಾಸಕ್ತಿಗಿಂದ ಮಂತ್ರಿಗಿರಿ ಪಡೆಯಲು ಓಡಾಟವೇ ಹೆಚ್ಚಾಗಿದೆ ಹೊರತು ಮಂಜೂರಿ ಹಕ್ಕು ಕೊಡಿಸುವಲ್ಲಿ ನಿರಾಸಕ್ತಿ ಎದ್ದು ತೋರುತ್ತಿದೆ. ಇದು ಖಂಡನಾರ್ಹ ಎಂದು ಹೇಳಿದರು. ಮುಂಡಗೋಡ ತಾಲೂಕಿನಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 7104 ಅರ್ಜಿಗಳು ಬಂದಿದ್ದು ಅವುಗಳಲ್ಲಿ 3318 ಅರ್ಜಿಗಳು ತಿರಸ್ಕಾರವಾಗಿದ್ದು ಕೇವಲ 305 ವೈಯಕ್ತಿಕ, ಸಮೂಹ ಮತ್ತು ಬುಡಕಟ್ಟು ವರ್ಗಕ್ಕೆ ಸೇರಿದವರಿಗೆ ಅರಣ್ಯ ಭೂಮಿ ಸಾಗುವಳಿ ಹಕ್ಕು ನೀಡಲಾಗಿದೆ. ಅರಣ್ಯಭೂಮಿ ಮೇಲೆ ಅವಲಂಬಿತವಾಗಿರುವ ಕುಟುಂಬಗಳಿಗೆ ಅರಣ್ಯಭೂಮಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿ ಮಾಡುವುದು ಅನಿವಾರ್ಯವಾಗಿದೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 11 ವರ್ಷಗಳಾದರೂ ಮಂಜೂರಿ ಪ್ರಕ್ರಿಯೆ ಮಂದಗತಿಯಲ್ಲಿ ಜರುಗುತ್ತಿರುವುದು ವಿಷಾದಕರ ಸಂಗತಿ ಎಂದು ಉಲ್ಲೇಖಿಸಿದರು. ಮೆರವಣಿಗೆಯಲ್ಲಿ ಶಿವಾನಂದ ಜೋಗಿ, ರಾಣೋಜಿ ಚಿಗಳ್ಳಿ, ಪ್ರಶಾಂತ ಜೈನ್‌, ಭೂತೇಶ, ಹನುಮಂತಪ್ಪ ಕಾಡಿಗಿ, ಮಂಜುನಾಥ ಅಣ್ವೇಕರ, ರಾಮಾ ಜೋಗಿ ಚಳಗೇರಿ, ಲಕ್ಷ್ಮಣ ವಾಲ್ಮೀಕಿ, ಗೌಸು ಖಾನ್‌, ಮಲ್ಲಿಕಾರ್ಜುನ, ದೇವರಾಜ ಗೊಂಡ, ಕುಮಟಾದ ಮಂಜುನಾಥ ಮರಾಠಿ, ಯಲ್ಲಾಪುರದ ಭೀಮ್ಸಿ ವಾಲ್ಮೀಕಿ, ಮಂಜುನಾಥ ಶಾಸ್ತ್ರಿ, ಸಿದ್ದಾಪುರದ ಸೀತಾರಾಮ ಗೌಡ, ಪ್ರಭಾಕರ ನಾಯ್ಕ, ಹೊನ್ನಾವರದ ಸಂಚಾಲಕ ಮೋಹನ ಗೌಡ, ಸೀತಾರಾಮ ನಾಯ್ಕ, ಅಂಕೋಲಾದ ರಾಜೇಶ ನಾಯ್ಕ, ಜೋಯಿಡಾದ ದಯಾನಂದ ಮಿರಾಶಿ, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒತ್ತಾಯಿಸಿದ ಪ್ರಮುಖ 5 ಬೇಡಿಕೆಗಳು: ಅರ್ಜಿಗಳ ಪುನರ್‌ ಪರಿಶೀಲಿಸುವ ಸಂದರ್ಭದಲ್ಲಿ ಅರಣ್ಯವಾಸಿ ಅರ್ಜಿದಾರನಿಗೆ ವೈಯಕ್ತಿಕವಾಗಿ ಲಿಖಿತ ಮೂಲಕ ನೋಟೀಸು ನೀಡಿ ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು. 2)ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯವು ನೀಡಿದ ಮಾರ್ಗಸೂಚಿಯಂತೆ ಗ್ರಾಮ ಸಭೆ ಅಥವಾ ಅರಣ್ಯ ಹಕ್ಕು ಸಮಿತಿಗಳು ಅರ್ಜಿಗಳನ್ನು ಪುನರ್‌ ಪರಿಶೀಲಿಸುವ ಸಮಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಹಕ್ಕಿಗೆ ಸಂಬಂಧ ಪರಿಗಣಿಸಬಹುದಾದ ಸಾಕ್ಷ್ಯಗಳ ಬಗ್ಗೆ ಮಾರ್ಗದರ್ಶನ ನೀಡುವಂತೆ ಸೂಕ್ತ ಕ್ರಮ ಜರುಗಿಸುವುದು. 3.) ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳು ತಿರಸ್ಕರಿಸಲ್ಪಟ್ಟು 1 ರಿಂದ 1 1/2 ವರ್ಷವಾದರೂ ಅರಣ್ಯವಾಸಿ ಅತಿಕ್ರಮಣದಾರರಿಗೆ ತಿರಸ್ಕೃತ ಆದೇಶದ ಪ್ರತಿ ತಲುಪಿಸದೇ ಇರುವುದನ್ನು ಖಂಡಿಸುತ್ತಾ ಅತಿ ಶೀಘ್ರದಲ್ಲಿ ತಿರಸ್ಕೃತಗೊಂಡ ಆದೇಶದ ಪ್ರತಿ ಅತಿಕ್ರಮಣದಾರರಿಗೆ ತಲುಪಿಸುವುದು. 4). ನೆನೆಗುದಿಗೆ ಬಿದ್ದಂತಹ ನಗರ ಅತಿಕ್ರಮಣದಾರರ ಅರ್ಜಿಗಳನ್ನು ಸಹಿತ ಪುನರ್‌ ಪರಿಶೀಲನೆ ಪ್ರಕ್ರಿಯೆಯಲ್ಲಿ ಅತೀ ಶೀಘ್ರದಲ್ಲಿ ಅಳವಡಿಸಿಕೊಳ್ಳುವುದು. 5) ರಾಜ್ಯ ಸರ್ಕಾರ ಪುನರ್‌ ಪರಿಶೀಲನೆಗೆ ನಿಗದಿಗೊಳಿಸಿದ ಜೂನ್‌ 30 ಕಾಲಮಾನದ ಸೀಮಿತ ಅವಧಿಯಲ್ಲಿ ಅರ್ಜಿ ವಿಲೇವಾರಿಗೆ ಅರಣ್ಯ ಅತಿಕ್ರಮಣದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ಪ್ರಕ್ರಿಯೆ ಜರುಗಿಸುವುದು. ಪೋಟೊ: 3ಎಮ್‌.ಎನ್‌.ಡಿ1- ಅರಣ್ಯ ಅತಿಕ್ರಮಣದಾರರು ಸೋಮವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ತೆರಳಿ ಮನವಿ ಅರ್ಪಿಸಿದರು 3ಎಮ್‌.ಎನ್‌.ಡಿ2- ಅರಣ್ಯ ಅತಿಕ್ರಮಣದಾರರು ಸೋಮವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

loading...